ಕಾಂಗ್ರೆಸ್ ಭ್ರಷ್ಟಾಚಾರದ ಸಮಗ್ರ ದಾಖಲೆ ರಾಹುಲ್ ಗಾಂಧಿಗೆ ರವಾನೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಅ.18: ಕಾಂಗ್ರೆಸ್ ಭ್ರಷ್ಟಾಚಾರ, ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ- ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ರವಾನಿಸುತ್ತೇನೆ. ಅವರು ಏನು ಮಾಡುತ್ತಾರೆಂದು ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲೆಸೆದರು.
ಬೀದರ್ ಜಿಲ್ಲೆಯ ಔರಾದ್ ನಲ್ಲಿ ಇಂದು ‘ಜನಸಂಕಲ್ಪ’ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯ ಹಗರಣಗಳ ವಿವರವನ್ನು ರಾಹುಲ್ ಗಾಂಧಿಗೆ ಕಳುಹಿಸಿ ಕೊಡಲಿದ್ದೇವೆ. 2016ರ ಶಿಕ್ಷಕರ ನೇಮಕಾತಿ ಹಗರಣ ಸೇರಿ ಎಲ್ಲ ವಿವರ ಕೊಡಲಿದ್ದೇವೆ. ಅರ್ಜಿ ಹಾಕದೇ ನೇಮಕಾತಿ ನಡೆದಿದೆ ಎಂದು ಆರೋಪಿಸಿದರು.
ಪ್ರಾಸಿಕ್ಯೂಟರ್ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲೂ ಹೀಗೇ ಆಗಿತ್ತು. ಎಲ್ಲ ಹಗರಣಗಳನ್ನು ಮುಚ್ಚಿ ಹಾಕಿದ್ದರು. ಇದು ಕಾಂಗ್ರೆಸ್ ಸರಕಾರ ಎಂದು ತಿಳಿಸಿದರು. ನಮ್ಮಲ್ಲಿ ಪಿಎಸ್ಸೈ ನೇಮಕಾತಿ ಆದಾಗ ತಪ್ಪು ಮಾಡಿದ್ದವರನ್ನು ಬಂಧಿಸಿದ್ದೇವೆ. ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರೆ. ಅಬ್ಬರಿಸಿ ಬೊಬ್ಬಿರಿದರೆ ಕೇಳುವವರು ಯಾರಿಲ್ಲ ಎಂದರು.
ಅತಿವೃಷ್ಟಿ ಸಂಬಂಧ ಪರಿಹಾರವನ್ನು ನಾವು ಹೆಚ್ಚಿಸಿದ್ದೇವೆ. ಮನೆಗಳ ಸಂಬಂಧ ಪರಿಹಾರ ಮೊತ್ತವನ್ನೂ ಹೆಚ್ಚಿಸಿದ್ದು, ಕಾಂಗ್ರೆಸ್ ಸರಕಾರದಲ್ಲಿ ಒಂದರಿಂದ ಒಂದೂವರೆ ವರ್ಷದಲ್ಲಿ ಪರಿಹಾರ ಕೊಡುತ್ತಿತ್ತು. ಈಗ ಕೇವಲ ಒಂದು ತಿಂಗಳಿನಲ್ಲಿ ಪರಿಹಾರ ನೀಡುತ್ತಿದ್ದೇವೆ ಎಂದರು.
ತಾಂಡಾಗಳ ಅಭಿವೃದ್ಧಿ, ಬಡವರಿಗೆ ನೆರವಾಗಿದ್ದೇವೆ. 23 ಸಾವಿರ ತಾಂಡಾಗಳನ್ನು ಗ್ರಾಮಗಳನ್ನಾಗಿ ಆದೇಶ ಮಾಡಲಾಗಿದೆ. ಮನೆಗಳಿಗೆ ಹಕ್ಕಪತ್ರ ನೀಡಲಾಗುತ್ತಿದೆ ಎಂದು ವಿವರಿಸಿದ ಅವರು, ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಆರಂಭವಾಗುತ್ತಿದೆ. ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂ. ನೀಡಲಿದ್ದೇವೆ. ಅದಕ್ಕಾಗಿ ಕ್ರಿಯಾ ಯೋಜನೆಯನ್ನೂ ಮಾಡಿದ್ದೇವೆ. 14 ಸಾವಿರ ನೇಮಕಾತಿಗೆ ಅನುಮತಿ ಕೊಟ್ಟಿದ್ದೇವೆ ಎಂದು ವಿವರಿಸಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಮಾತನಾಡಿ, ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಈ ಭಾಗದ ನನೆಗುದಿಗೆ ಬಿದ್ದಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಸಚಿವರಾದ ಪ್ರಭು ಚೌಹಾಣ್, ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಶ್ರೀರಾಮುಲು, ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.