ಶಾಸಕ ಯತ್ನಾಳ್ ಬಗ್ಗೆ ಅರುಣ್ ಸಿಂಗ್ ತಿಳಿದುಕೊಂಡು ಮಾತನಾಡಲಿ: ಬಸವಜಯ ಮೃತ್ಯುಂಜಯ ಶ್ರೀ ಆಕ್ರೋಶ

Update: 2022-10-18 14:49 GMT

ಬೆಳಗಾವಿ, ಅ.18: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಕರ್ನಾಟಕದ ಬಗ್ಗೆ ತಿಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಕಾರ್ಯಕರ್ತರು, ನಾಯಕರು ಎಂಬ ಮಾತುಗಳನ್ನು ಆಡುತ್ತಾರೆ. ಆದರೆ, ಅರುಣ್ ಸಿಂಗ್ ಯಾವುದೇ ಕಾರಣಕ್ಕೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹಗುರವಾಗಿ ಮಾತನಾಡದಂತೆ ತಾಕೀತು ಮಾಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಶ್ರೀ ಆಗ್ರಹಿಸಿದ್ದಾರೆ.

ಮಂಗಳವಾರ ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಮಂತ್ರಿಸ್ಥಾನ ತ್ಯಾಗ ಮಾಡಿ ಪಂಚಮಸಾಲಿ ಸಮಾಜದ ಪರವಾಗಿ ಹೋರಾಟಕ್ಕೆ ನಿಂತುಕೊಂಡಿದ್ದಾರೆ. ಅವರಿಗೆ ಎಷ್ಟೇ ತೊಂದರೆ ಅಡೆ ತಡೆ ಬಂದರೂ ಪಕ್ಷದಲ್ಲಿ ಏನೇ ಟೀಕೆ ಬಂದರೂ, ಅವರು ಪಕ್ಷದ ಒಳಗೆ ಇದ್ದು ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. 

ಅರುಣ್ ಸಿಂಗ್‍ಗಿಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರಿಗೆ ನಾನು ಮನವಿ ಮಾಡುತ್ತೇನೆ. ಪ್ರಧಾನಿ ಮೋದಿ ಸಾಮಾನ್ಯ ಕಾರ್ಯಕರ್ತರಿಗೂ ಗೌರವ ನೀಡುತ್ತಾರೆ. ಬಿಜೆಪಿಯಲ್ಲಿರುವ 80 ಪಸೆರ್ಂಟ್ ಪಂಚಮಸಾಲಿಗಳು ಪಕ್ಷ ಕಟ್ಟುವಲ್ಲಿ ದುಡಿದಿದ್ದಾರೆ.

ಆ ಸಮುದಾಯದ ನಾಯಕರನ್ನು ಯಾರೂ ಅಗೌರವದಿಂದ ಕಾಣಬಾರದು. ಆದರೆ, ಅರುಣ್‍ಸಿಂಗ್ ಹೇಳಿಕೆ ಇಡೀ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ಉಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹುಲಿ ಯಾವತ್ತಿದ್ದರೂ ಹುಲಿ: ಹುಲಿ ಯಾವತ್ತಿದ್ದರೂ ಹುಲಿಯೇ ಹೊರತು ಇಲಿಯಾಗಲು ಸಾಧ್ಯವಿಲ್ಲ. ನಮ್ಮ ಸಮಾಜದ ಯಾವುದೇ ವ್ಯಕ್ತಿ ಇರಲಿ ಅವರು ನಾಯಕರು ಎಂದು ಗೌರವ ಕೊಡುತ್ತೇವೆ. ಬಸನಗೌಡ ಪಾಟೀಲ್ ಯತ್ನಾಳ್ ಈವರೆಗೂ ಕೇವಲ ಹಿಂದೂ ನಾಯಕರಾಗಿದ್ದರು. ಈಗ ಪಂಚಮಸಾಲಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಇಡೀ ಸಮಾಜ ಅವರ ಮೇಲೆ ನಂಬಿಕೆ ಇಟ್ಟಿದೆ. ಅ.21ರಂದು ಯಾರು ನಾಯಕರು ಯಾರು ನಾಯಕರಲ್ಲ ಎಂದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ಅ.21ರಂದು ಪಂಚಮಸಾಲಿ ಸಮಾವೇಶ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅ.21ರಂದು ಹುಕ್ಕೇರಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಅದೇ ದಿನ ಕಿತ್ತೂರು ಕರ್ನಾಟಕದ ಪ್ರಥಮ ರಾಷ್ಟ್ರಮಾತೆ ಚನ್ನಮ್ಮ ರವರ 244ನೆ ಜಯಂತಿ, 199ನೆ ವಿಜಯೋತ್ಸವ ಮಾಡಲಾಗುವುದು. ಅ.21ರೊಳಗೆ ಮೀಸಲಾತಿ ಘೋಷಣೆ ಮಾಡದಿದ್ದರೆ ಅಂತಿಮ ಹಂತದ ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News