ಯುಜಿ-ನೀಟ್‍ಗೆ ಅರ್ಜಿ ಸಲ್ಲಿಸಲು ಪರದಾಟ; ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

Update: 2022-10-18 18:19 GMT

ಬೆಂಗಳೂರು, ಅ.18: ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಸಾವಿರಾರು ವೈದ್ಯಕೀಯ ಸೀಟು ಆಕಾಂಕ್ಷಿಗಳು ಯುಜಿ-ನೀಟ್‍ಗೆ ಅರ್ಜಿ ಸಲ್ಲಿಸಲು ಹಾಗೂ ನೋಂದಣಿ ಮಾಡಿಕೊಳ್ಳಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುಜಿ ನೀಟ್ ನೋಂದಣಿ ಪ್ರಕ್ರಿಯೆ ಅ.14ರಿಂದ ಆರಂಭವಾಗಿದೆ. ಈ ಮೊದಲು ಅರ್ಜಿ ಸಲ್ಲಿಕೆಗೆ ಅ.18 ಕೊನೆಯ ದಿನವಾಗಿತ್ತು. ಇದನ್ನು ಅ.20ರವರೆಗೆ ವಿಸ್ತರಿಸಲಾಗಿದೆ. 

ಸಮರ್ಪಕವಾಗಿ ನೋಂದಣಿ ಆಗದೆ ಇರುವುದರಿಂದ ವಿದ್ಯಾರ್ಥಿಗಳು ಮಧ್ಯರಾತ್ರಿ ಅರ್ಜಿ ಸಲ್ಲಿಸಲು ಪ್ರಯತ್ನಿಸುವ ಸ್ಥಿತಿ ಎದುರಾಗಿದೆ. ಈ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅ.20ರವರೆಗೆ ವಿಸ್ತರಿಸಿದೆ. 

ಒಂದು ವೇಳೆ ನೋಂದಣಿ ಸಾಧ್ಯವಾಗದೇ ಇದ್ದರೆ, ಅಂತಹ ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆದುಕೊಳ್ಳಲು ಕಷ್ಟವಾಗಲಿದೆ. ಇದರಿಂದ, ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ತಾಂತ್ರಿಕ ಸಮಸ್ಯೆ ಕುರಿತು ಕೆಇಎ ಸಹಾಯವಾಣಿಗೆ ಕರೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ತಾಂತ್ರಿಕ ಸಮಸ್ಯೆಯನ್ನು ಕೆಇಎ ನೀಟ್ ಪರೀಕ್ಷೆ ನಡೆಸಿದ ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ(ಎನ್‍ಟಿಎ) ಮೇಲೆ ಹಾಕಿದೆ. 

ಎನ್‍ಟಿಎ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವುದರಿಂದ ಅರ್ಜಿ ಸಲ್ಲಿಸುವಾಗ ಒಟಿಪಿ ಬಾರದೇ ಸಮಸ್ಯೆ ಎದುರಾಗುತ್ತಿದೆ. ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ಕೆಇಎ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News