ಕಾಂಗ್ರೆಸ್ ನ ‘SayCM' ಅಭಿಯಾನಕ್ಕೆ ನಮ್ಮ ಕೆಲಸಗಳ ಮೂಲಕ ಉತ್ತರ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-19 14:46 GMT

ಯಾದಗಿರಿ, ಅ.19: ‘ಕಾಂಗ್ರೆಸ್ ಪಕ್ಷ ಕೈಗೊಂಡಿರುವ ‘ಸೇಸಿಎಂ’ ಅಭಿಯಾನ ಉದ್ಯೋಗವಿಲ್ಲದವರು ಮಾಡುವುದು. ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸಗಳು ಮಾತನಾಡಬೇಕೆಂಬುದರ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಯಾದಗಿರಿ ಜಿಲ್ಲೆಯ ಹುಣಸಗಿ ಹೆಲಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಏನು ಮಾಡುತ್ತಾರೋ ಮಾಡಲಿ. ಆದರೆ ನಮಗೆ ಜವಾಬ್ದಾರಿ ಇದೆ. ಸರಕಾರ ನಡೆಸುವುದು, ಜನಕಲ್ಯಾಣದ ಕೆಲಸ ಮಾಡುತ್ತಿದ್ದೇವೆ. ನಾವು ನಮ್ಮ ಕೆಲಸದ ಮುಖಾಂತರ ಜನರ ಬಳಿ ತೆರಳುತ್ತಿದ್ದೇವೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲದ ಮೂರು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿರುವ ಪ್ರಕರಣದಲ್ಲಿ ಸಿಐಡಿ 20 ಜನರನ್ನು ಬಂಧಿಸಿದೆ. ಪಿಎಸ್ಸೈ ನೇಮಕಾತಿ ಅಕ್ರಮ ಕುರಿತು ಸಿಐಡಿ ಈಗಾಗಲೇ ವರದಿ ಸಲ್ಲಿಸಿದೆ. ಸರಕಾರಿ ಅಭಿಯೋಜಕರ ನೇಮಕಾತಿ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದ್ದು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. 

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಸಂಬಂಧ ನಿನ್ನೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಯಾಗಿದೆ. ಕಳೆದ 8-10 ತಿಂಗಳಿಂದ ನ್ಯಾಯಾಧೀಶರು ಒಬ್ಬರು ಮಹಾರಾಷ್ಟ್ರ ಮತ್ತು ಕರ್ನಾಟಕದವರಾಗಿದ್ದರಿಂದ ವಿಚಾರಣೆಯನ್ನು ನಿರಾಕರಿಸಿದ್ದರು. ಇಬ್ಬರು ಹೊಸ ನ್ಯಾಯಾಧೀಶರ ನೇಮಕಾತಿಯಾಗಿದ್ದು, ವಿಚಾರಣೆಯಾಗಿ, ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಪುನಃವಿಚಾರಣೆಯಾಗಲಿದೆ. ಬಹುತೇಕವಾಗಿ ಎಲ್ಲ ಪಾಟಿ ಸವಾಲುಗಳಿಗೆ ಉತ್ತರ ನೀಡಲಾಗಿದೆ. ಶೀರ್ಘವಾಗಿ ತೀರ್ಪು ಹೊರಬೀಳಲಿದೆ. ಬ್ರಿಜೇಶ್ ಕುಮಾರ್ ಮಿಶ್ರಾ ಅವರ ನ್ಯಾಯಮಂಡಳಿ ಆದೇಶದ ಅಧಿಸೂಚನೆ ಹೊರಡಿಸಲು  ಆದೇಶ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News