ಚುನಾವಣಾ ಅಕ್ರಮ ಪ್ರಕರಣ: ಸಂಸದ ಪ್ರಜ್ವಲ್ ರೇವಣ್ಣ ವರ್ತನೆಗೆ ಹೈಕೋರ್ಟ್ ಅಸಮಾಧಾನ

Update: 2022-10-20 05:54 GMT
ಪ್ರಜ್ವಲ್ ರೇವಣ್ಣ -ಸಂಸದರು

ಬೆಂಗಳೂರು, ಅ.19: ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಅನುಮತಿಯನ್ನು ಪಡೆಯದೆ, ಶಿಷ್ಟಾಚಾರ ಉಲ್ಲಂಘಿಸಿ ವಕೀಲರೊಂದಿಗೆ ಮಾತನಾಡಲು ಮುಂದಾದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. 

ವಿಚಾರಣೆ ಸಂದರ್ಭದಲ್ಲಿ ವಕೀಲ ಕೇಶವರೆಡ್ಡಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲಿಗೆ ಹೆಚ್ಚಿನ ವಿವರಣೆ ನೀಡಲು ಪ್ರಜ್ವಲ್ ಮುಂದಾಗುತ್ತಿದ್ದುದನ್ನು ಮತ್ತು ವಿಚಾರಣೆ ಮುಗಿದ ನಂತರ ವಕೀಲರೊಂದಿಗೆ ಮಾತನಾಡಲು ಮುಂದಾದ್ದಕ್ಕೆ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕರಾಗಿದ್ದರು. ಅವರ ಪ್ರಚಾರದ ವೆಚ್ಚ ತೋರಿಸಬೇಕಾದ ಅಗತ್ಯವಿಲ್ಲ ಎಂಬುದಾಗಿ ನಿಯಮಗಳಲ್ಲಿದೆ. ಹೀಗಾಗಿ, ಅವರ ಖರ್ಚನ್ನು ತೋರಿಸಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ನ್ಯಾಯಪೀಠಕ್ಕೆ ವಿವರಿಸಿದರು. 

ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಭಾರಿ ಮೊತ್ತದ ಹಣವನ್ನು ಖರ್ಚು ಮಾಡಿರುವುದು ಸುಳ್ಳು. ನಾನು ಮಾಡಿರುವ ಖರ್ಚುಗಳಿಗೆ ಈಗಾಗಲೇ ವಿವರಣೆಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇನೆ ಎಂದು ಪೀಠಕ್ಕೆ ವಿವರಿಸಿದರು. ವಿಚಾರಣೆಯನ್ನು ನ.4ಕ್ಕೆ ಮುಂದೂಡಿತು. 

ಪ್ರಕರಣವೇನು?: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮ ಎಸಗಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯ ಕುರಿತು ನಿಖರ ಮಾಹಿತಿ ನೀಡಿಲ್ಲ. ಖರ್ಚು–ವೆಚ್ಚಗಳನ್ನು ನ್ಯಾಯೋಚಿತವಾಗಿ ಸಲ್ಲಿಸಿಲ್ಲ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನೇ ಗೆದ್ದ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News