ಮಕ್ಕಳ ಪೋಷಣೆ; ಮೆಕ್ಸಿಕೋ ಪತ್ನಿ, ಭಾರತದ ಪತಿ ನಡುವೆ ಸಂಧಾನ ಮಾಡಿದ ಹೈಕೋರ್ಟ್
ಬೆಂಗಳೂರು, ಅ.20: ಮೆಕ್ಸಿಕೋ ದೇಶದ ಪತ್ನಿ ಮತ್ತು ಭಾರತೀಯ ಪತಿಯ ನಡುವೆ ಉಂಟಾದ ಕೌಟುಂಬಿಕ ಕಲಹದಿಂದ ಅವರ ಮಕ್ಕಳ ಭವಿಷ್ಯವನ್ನು ಪರಿಗಣಿಸಿರುವ ಹೈಕೋರ್ಟ್, ವಾರದ ನಾಲ್ಕು ದಿನ ತಾಯಿ ಮತ್ತು ಮೂರು ದಿನ ತಂದೆಯೊಂದಿಗೆ ಮಕ್ಕಳನ್ನು ಪೋಷಣೆ ಮಾಡುವಂತೆ ಹೇಳಿದೆ.
ತನಗೆ ಯಾವುದೇ ಮಾಹಿತಿ ನೀಡದೆ, ಮಕ್ಕಳನ್ನು ಭಾರತಕ್ಕೆ ಕರೆತರಲಾಗಿದ್ದು, ಮಕ್ಕಳನ್ನು ಹುಡುಕಿಕೊಡುವಂತೆ ಕೋರಿ ಮೆಕ್ಸಿಕೋ ಮೂಲದ ಡೇನಿಲಯ್ ಲೈರಾ ನ್ಯಾನಿ ಸಲ್ಲಿಸಿದ್ದ ಹೆಬಿಯಾಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ದಂಪತಿಗೆ ಮನವರಿಕೆ ಮಾಡಿ, ಇಬ್ಬರೂ ಮಕ್ಕಳ ಪೋಷಣೆ ಮಾಡಲು ಸೂಚಿಸಿದ್ದಾರೆ.
ಮಕ್ಕಳು ರವಿವಾರ ಸಂಜೆ 6 ರಿಂದ ಶುಕ್ರವಾರ ಮಧ್ಯಾಹ್ನ 1.30ರವರೆಗೆ ತಾಯಿಯ ಜೊತೆ, ಶುಕ್ರವಾರ ಮಧ್ಯಾಹ್ನ 1.30ರಿಂದ ರವಿವಾರ ಸಂಜೆ 6ರವರೆಗೆ ತಂದೆಯೊಂದಿಗೆ ಇರಬೇಕು. ಈ ಸಂದರ್ಭದಲ್ಲಿ ಪತ್ನಿ ನೆಲೆಸುವುದಕ್ಕೆ ಪ್ರತ್ಯೇಕ ಮನೆ ಹಾಗೂ ಮಕ್ಕಳ ಪೋಷಣೆಗೆ ಮಾಸಿಕ 10 ಸಾವಿರ ರೂ.ಗಳನ್ನು ನೀಡಬೇಕು ಎಂದು ಪತಿ ಬ್ಯಾನರ್ಜಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಜೊತೆಗೆ, ಈ ಸಂಬಂಧ ಜಂಟಿ ಮೆಮೋ ಸಹ ಪಡೆದುಕೊಂಡಿದೆ. ಜೊತೆಗೆ, ವಿಚ್ಛೇದನ ಕೋರಿ ದಂಪತಿ ಸಲ್ಲಿಸಿರುವ ವಿಚಾರಣೆ ಕೌಟುಂಬಿಕ ನ್ಯಾಯಾಲಯದಲ್ಲಿ ಆದೇಶ ಹೊರ ಬೀಳುವವರೆಗೂ ಇದೇ ಪದ್ಧತಿಯನ್ನು ಮುಂದುವರೆಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಮಕ್ಕಳನ್ನು ರಾಜ್ಯದಿಂದ ಹೊರಭಾಗಗಳಿಗೆ ಕರೆದುಕೊಂಡು ಹೋಗುವಂತಿಲ್ಲ ಎಂದು ನ್ಯಾಯಪೀಠ ನಿಬರ್ಂಧ ವಿಧಿಸಿ ಆದೇಶ ಹೊರಡಿಸಿದೆ.