ಆಡಳಿತ ವೈಫಲ್ಯಗಳನ್ನು ಟೀಕಿಸುವ ಸ್ವಾಮೀಜಿಗಳಿಗೆ ಸರಕಾರದಿಂದ ಬೆದರಿಕೆ: ಪ್ರಣವಾನಂದ ಸ್ವಾಮೀಜಿ ಆರೋಪ

Update: 2022-10-20 17:27 GMT
ಪ್ರಣವಾನಂದ ಸ್ವಾಮೀಜಿ 

ಬೀದರ್‌: 'ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಟೀಕಿಸುತ್ತಿರುವ ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳಿಗೆ ಕೆಲವು ಸಚಿವರು ಬೆದರಿಕೆ ಹಾಕುತ್ತಿದ್ದಾರೆ' ಎಂದು ಕಲಬುರಗಿಯ ಚಿತ್ತಾಪುರದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ಪೀಠಾಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಆರೋಪ ಮಾಡಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರಕಾರದ ಭಾಗವಾಗಿರುವ ಕೆಲವು ಸಚಿವರು ಆಮಿಷ ಒಡ್ಡಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಆಮಿಷಕ್ಕೆ ಒಳಗಾಗದ ಸ್ವಾಮೀಜಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.  

''ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳನ್ನು ಹತ್ತಿಕ್ಕಲಾಗುತ್ತಿದೆ''

''ಸಾಗರದಲ್ಲಿರುವ ಈಡಿಗ ಸಮುದಾಯದ ಸಿಗಂದರ ಚೌಡೇಶ್ವರಿ ದೇವಸ್ಥಾನವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ಸರ್ಕಾರಕ್ಕೆ ಬ್ರಾಹ್ಮಣರ ಮಠಗಳನ್ನು ಅಧೀನಕ್ಕೆ ತೆಗೆದುಕೊಳ್ಳುವ ತಾಕತ್ತು ಇದೆಯೇ'' ಎಂದು ಇದೇ ವೇಳೆ ಪ್ರಶ್ನಿಸಿದರು.

ಪಾದಯಾತ್ರೆ: 'ನಾರಾಯಣ ಗುರುಗಳ ಹೆಸರಿನಲ್ಲಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸದೆ ಇರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ನಾರಾಯಣ ಗುರುಗಳ ಪವಿತ್ರ ಸ್ಥಳವಾದ ಮಂಗಳೂರಿನ ಕುದ್ರೋಳಿಯಿಂದ ಬೆಂಗಳೂರಿನವರೆಗೆ 40 ದಿನಗಳ 650 ಕಿ.ಮೀ. ಪಾದಯಾತ್ರೆಯನ್ನು ಜನವರಿ 6ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ' ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News