‘ಪೋಷಕರಿಂದ ವಂತಿಗೆ' ಉಚಿತ-ಕಡ್ಡಾಯ ಶಿಕ್ಷಣದ ಉಲ್ಲಂಘನೆ: ಸಚಿವ ಬಿ.ಸಿ.ನಾಗೇಶ್ ರಾಜೀನಾಮೆಗೆ ನಿರಂಜನಾರಾಧ್ಯ ಆಗ್ರಹ

Update: 2022-10-21 15:55 GMT

ಬೆಂಗಳೂರು, ಅ. 21: ಶಾಲೆಯ ನಿರ್ವಹಣಾ ವೆಚ್ಚವನ್ನು ಬಡ ಪಾಲಕರ ಹೆಗಲಿಗೆ ವರ್ಗಾಯಿಸುವುದು ಅಂತಾರಾಷ್ಟ್ರೀಯ ಕಾನೂನು, ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಮ್ಮ ಸಂವಿಧಾನಾತ್ಮಕ ಹಾಗೂ ನೆಲದ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಸಂಪೂರ್ಣ ವಿಫಲರಾಗಿದ್ದು, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಶುಕ್ರವಾರ ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು,‘ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಶಿಕ್ಷಣ ವ್ಯವಸ್ಥೆಯನ್ನು ಧರ್ಮ ಹಾಗೂ ಅವೈಜ್ಞಾನಿಕ ನೆಲೆಯಲ್ಲಿ ಹಾಳುಗೆಡವಿದ್ದಾರೆ. ಸಚಿವರು ಶಿಕ್ಷಣ ಒಂದು ಸಾಮಾಜಿಕ ಒಳಿತು ಹಾಗು ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಅದೊಂದು ಮೂಲಭೂತ ಹಕ್ಕೆಂದು ತಿಳಿದು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೂರ್ಣವಾಗಿ ಸೋತಿದ್ದಾರೆ. ಶಾಲಾ ಶಿಕ್ಷಣ ಗೊಂದಲಮಯವಾಗಿದ್ದು, ವ್ಯವಸ್ಥೆ ಪೂರ್ಣವಾಗಿ ಹಳಿತಪ್ಪಿದೆ ಎಂದು ಟೀಕಿಸಿದ್ದಾರೆ.   

ಶಿಕ್ಷಣ ಇಲಾಖೆ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಸಂಪೂರ್ಣವಾಗಿ ಸೋತಿದ್ದು, ಪ್ರತಿನಿತ್ಯ ಒಂದಲ್ಲ ಒಂದು ಗೊಂದಲವನ್ನು ಸೃಷ್ಟಿಸಿ ಸುದ್ದಿ ಮಾಡುತ್ತಿದೆ. ಈಗ ಪೋಷಕರಿಂದ ದೇಣಿಗೆ ಪಡೆಯುವ ಆದೇಶವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News