ತುಮಕೂರು : ವಿವಿಯ ಎಸ್ಸಿ- ಎಸ್ಟಿ ಹಾಸ್ಟೆಲ್ ನಲ್ಲಿ ಚಿಪ್ಪಿನಲ್ಲಿಯೇ ಊಟ!

Update: 2022-10-22 07:55 GMT

ತುಮಕೂರು: ವಿಶ್ವವಿದ್ಯಾಲಯದ ಪರಿಧಿಗೆ ಒಳಪಡುವ ಸ್ನಾತಕೋತ್ತರ ಎಸ್ಸಿ ಎಸ್ಟಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನಲ್ಲಿ ಊಟ ಬಡಿಸಿರುವ ಫೋಟೋ ಒಂದು ವೈರಲ್ ಆಗಿದೆ. 

ಶುಕ್ರವಾರ ರಾತ್ರಿ ಹಾಸ್ಟೆಲ್ ನಲ್ಲಿ ಊಟ ಬಡಿಸುವ ವೇಳೆ ಸೌಟಿಲ್ಲದೆ ತೆಂಗು ಚಿಪ್ಪಿನಲ್ಲಿ ಅನ್ನಕ್ಕೆ ಚೆಟ್ನಿ ಸುರಿದಿದ್ದಾರೆ. ಮೂಲ ಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಕೇಳಿದ್ದ ವೇಳೆ ಈ ಹಿಂದೆ ವಾರ್ಡನ್ ಒಬ್ಬರು ಬದರಿಕೆ ಹಾಕಿ, ರಾಜೀನಾಮೆ ನೀಡಿದ್ದು ವರದಿಯಾಗಿತ್ತು.

'ಸುಮಾರು ದಿನಗಳಿಂದ ಸಾಂಬರ್ ಕೂಡ ಚಿಪ್ಪಿನಲ್ಲಿಯೇ ಬಡಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವ ಮೂಲಕ ಪ್ರಶ್ನಿಸುವ ಹಕ್ಕನ್ನೇ ಸಿಬ್ಬಂದಿ ಹತ್ತಿಕ್ಕಿರುವ ಆರೋಪ ವಿದ್ಯಾರ್ಥಿಗಳಿಂದ ಕೇಳಿಬರುತ್ತಿದೆ.  ಅಡುಗೆ ಮಾಡಲು ಬಳಸುವ ನೀರಿನ ಸಂಪ್ ಶುದ್ಧತೆಯಿಂದ ಕೂಡಿಲ್ಲ. ಅಡುಗೆ ರುಚಿ ಇರುವುದಿಲ್ಲ. ತರಕಾರಿ ಹಾಕದೆ ಅಡುಗೆ ಮಾಡಿದರೆ ಓದುವ ಮಕ್ಕಳು ತಿನ್ನಲು ಸಾಧ್ಯವೇ? ಪ್ರಸ್ತುತ ಶೌಚಾಲಯಗಳಿಗೆ ಮೂಗಿಡುವಂತಿಲ್ಲ' ಎಂದು  ವಿದ್ಯಾರ್ಥಿಯೊಬ್ಬರು ದೂರಿದ್ದಾರೆ.

"ಹಾಸ್ಟೆಲ್ ನಲ್ಲಿ ಅನಧಿಕೃತ ವ್ಯಕ್ತಿಗಳು ಬಂದು ಹೋಗುತ್ತಾರೆ. ಭದ್ರತಾ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಣ ಕೊಟ್ಟರೆ ಯಾರು ಬೇಕಾದರೂ ಹಾಸ್ಟೆಲ್ ಗೆ ಬಂದು ಉಳಿಯಬಹುದು. ಹಾಸ್ಟೆಲ್ ಒಂಥರಾ ಪೇಯಿಂಗ್ ಗೆಸ್ಟ್ ಆಗಿ ಹೋಗಿದೆ. ಸಿಸಿ ಟಿವಿ ಇಲ್ಲದಿರುವುದೇ ಇವೆಲ್ಲದಕ್ಕೂ ಆಸ್ಪದ". 

- ಹೆಸರು ಬಹಿರಂಗಪಡಿಸಲು ಇಚ್ಚಿಸದ ವಿದ್ಯಾರ್ಥಿ

--------------------------------------------------

"ಊಟ ಬಡಿಸುವಾಗ ತೆಂಗಿನ ಚಿಪ್ಪು ಬಳಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಸ್ಟೆಲ್ ಗೆ ಅಡುಗೆ ಪರಿಕರಗಳನ್ನು ಒದಗಿಸಿದ್ದೇವೆ. ತಕ್ಷಣವೇ ವಾರ್ಡನ್ ಅವರಿಂದ ಮಾಹಿತಿ ಪಡೆಯುತ್ತೇನೆ". 

-ಪ್ರೊ.ಎಂ.ವೆಂಕಟೇಶ್ವರಲು. ಕುಲಪತಿ, ತುಮಕೂರು ವಿಶ್ವವಿದ್ಯಾಲಯ

-------------------------------------------------------

"ಈ ತರಹದ್ದು ನಿಜಕ್ಕೂ ದುರಂತ. ಸಿಂಡಿಕೇಟ್ ಮೆಂಬರ್ಸ್ ಗಳಿಗೆ ಟ್ರಿಪ್ ಹೋಗಲು ಲಕ್ಷಾಂತರ ರೂ. ಹಣ ಖರ್ಚು‌ ಮಾಡಲಾಗುತ್ತದೆ. ಓದುವ ಮಕ್ಕಳ‌ ಊಟದ ವಿಚಾರದಲ್ಲಿ ಈ ರೀತಿಯ ಮನಸ್ಥಿತಿ ದಯನೀಯ. ಈ ಹಾಸ್ಟೆಲ್ ನಲ್ಲಿ ಗುಣಮಟ್ಟದ ಊಟ ನೀಡುವ ವಿಚಾರಕ್ಕಾಗಿಯೇ ವಾರ್ಡನ್ ಗೆ ಎಚ್ಚರಿಕೆ ನೀಡಿದ್ದೆವು. ಚಿಪ್ಪಿನಲ್ಲಿ ಊಟ ಬಡಿಸಿರುವ ಘಟನೆ ನಿಜಕ್ಕೂ ಸತ್ಯವೇ ಆಗಿದ್ದಲ್ಲಿ‌ ಮುಂದಿನದನ್ನು ಊಹಿಸಲಿ".

- ಕೊಟ್ಟ ಶಂಕರ್, ದಲಿತ ಹೋರಾಟಗಾರ ಹಾಗೂ ಸಿಂಡಿಕೇಟ್ ಮಾಜಿ ಸದಸ್ಯ, ತುಮಕೂರು ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News