ದೀಪಾವಳಿ; ಹೈಕೋರ್ಟ್ ಗೆ ಮಂಗಳವಾರವೂ ರಜೆ

Update: 2022-10-22 15:11 GMT

ಬೆಂಗಳೂರು, ಅ.22: ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ಹೈಕೋರ್ಟ್‍ಗೆ ಮಂಗಳವಾರವೂ(ಅ.25) ರಜೆ ಘೋಷಿಸಲಾಗಿದೆ.

ಈ ಹಿಂದೆ ಸೋಮವಾರ ಮತ್ತು ಬುಧವಾರ ರಜೆ ನೀಡಲಾಗಿತ್ತು. ಇದೀಗ ಮಧ್ಯದ ಮಂಗಳವಾರವೂ (ಅ.25) ರಜೆ ಘೋಷಿಸಲಾಗಿದೆ.ಆದರೆ, ವಿಚಾರಣಾಧೀನ ನ್ಯಾಯಾಲಯಗಳಿಗೆ ರಜೆ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.

ವಿಚಾರಣಾಧೀನ ನ್ಯಾಯಾಲಯಗಳಿಗೂ ರಜೆ ಘೋಷಿಸುವಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರಿಗೆ ಬೆಂಗಳೂರು ವಕೀಲರ ಸಂಘ(ಎಎಬಿ) ಮನವಿ ಮಾಡಿದೆ.ಅ.25ರಂದು ಪ್ರಕರಣಗಳಲ್ಲಿ ಭಿನ್ನ ನಿಲುವು ತಳೆಯದಂತೆ ವಿಚಾರಣಾಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗುವುದು. ಈ ಸಂಬಂಧ ಶನಿವಾರದೊಳಗೆ ಅಧಿಸೂಚನೆ ಅಥವಾ ಸುತ್ತೋಲೆ ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ ಎಂದು ಎಎಬಿ ತಿಳಿಸಿದೆ.

ಹೈಕೋರ್ಟ್‍ಗೆ ಮಂಗಳವಾರ ರಜೆ ನೀಡಿ, ವಿಚಾರಣಾಧೀನ ನ್ಯಾಯಾಲಯಗಳಿಗೆ ಕರ್ತವ್ಯ ದಿನವನ್ನಾಗಿಸಲಾಗಿದೆ. ಇದರಿಂದ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುವ ಸಾವಿರಾರು ವಕೀಲರು ಮತ್ತು ನ್ಯಾಯಾಂಗದ ಸಿಬ್ಬಂದಿಗೆ ದೀಪಾವಳಿ ಆಚರಣೆಗೆ ಅಡಚಣೆ ಉಂಟು ಮಾಡಲಾಗಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯಗಳ ವಿಚಾರದಲ್ಲೂ ಹೈಕೋರ್ಟ್‍ಗೆ ಅನ್ವಯಿಸಿರುವ ನಿಲುವು ತಳೆಯಬೇಕು ಎಂದು ಸಂಘವು ಮನವಿ ಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News