ಕೋವಿಡ್‍ನಿಂದ ಮುಚ್ಚಲ್ಪಟ್ಟ ಕೈಗಾರಿಕಾ ಘಟಕಗಳ ಪುನಶ್ಚೇತನಕ್ಕೆ ಕ್ರಮ: ಸಚಿವ ಎಂಟಿಬಿ ನಾಗರಾಜ್

Update: 2022-10-22 15:16 GMT

ಬೆಂಗಳೂರು, ಅ. 22: ಕೋವಿಡ್ ಸಾಂಕ್ರಮಿಕದಿಂದಾಗಿ ಎರಡು ವರ್ಷಗಳಲ್ಲಿ ಬಹಳಷ್ಟು ಘಟಕಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮುಚ್ಚಲ್ಪಟ್ಟಿರುವ ಅಂಶವು ಸರಕಾರದ ಗಮನಕ್ಕೆ ಬಂದಿದ್ದು, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ.

ಶನಿವಾರ ಕಾಸಿಯಾ ಮತ್ತು ಎಂಎಸ್‍ಎಂಇ ಅಭಿವೃದ್ಧಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ವಿಡಿಪಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಚ್ಚಲ್ಪಟ್ಟಿರುವ ಘಟಕಗಳು ಯಾವ ಕಾರಣಗಳಿಂದಾಗಿ ಮುಚ್ಚಲ್ಪಟ್ಟಿವೆ ಎಂಬುದನ್ನು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹಾಗೆಯೇ ಹೊಸ ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ತಾಲ್ಲೂಕು ಮಟ್ಟದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುತ್ತಿದೆ ಎಂದರು. 

ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಅಂಡ್ ಇನೊವೇಶನ್ ಯೋಜನೆಗೆ ಬರಬೇಕಾದ ರೂ. 2.65 ಕೋಟಿ ಬಾಕಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಲಾಗುತ್ತದೆ. ನೆಲಮಂಗಲ ಕೈಗಾರಿಕಾ ವಸಾಹತುವಿಗೆ ಸಂಬಂಧಿಸಿದ ಸಮಸ್ಯೆಗಳು, ಕೈಗಾರಿಕಾ ಘಟಕಗಳಿಗೆ ವಿಧಿಸುತ್ತಿರುವ ಆಸ್ತಿ ತೆರಿಗೆ ಹಾಗೂ ಇತರೆ ಸಮಸ್ಯೆಗಳ ಕುರಿತು ಕಾಸಿಯಾ ಸಲ್ಲಿಸಿದ್ದ ಬೇಡಿಕೆ ಕುರಿತಂತೆ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಅವರು ಆಶ್ವಾಸನೆ ನೀಡಿದರು.

ಕೆನರಾ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ದೆಬಾನಂದ ಸಾಹೂ, ಸುಧಾಕರ್ ನಾಯಕ್, ಸತ್ಯನಾರಾಯಣ ಭಟ್ ಸೇರಿದಂತೆ ಕಾಸಿಯಾ ಪದಾಧಿಕಾರಿಗಳು, ಸಂಘಟಕ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News