ಚಿಕ್ಕಮಗಳೂರು: ಸಿಡಿಎ, ಕಂದಾಯ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ, ಅನಧಿಕೃತ ರೆಸಾರ್ಟ್‍ಗೆ ಬೀಗ
ಚಿಕ್ಕಮಗಳೂರು: ಕೃಷಿ ಜಮೀನಿನಲ್ಲಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನಡೆಸಲಾಗುತ್ತಿದ್ದ ರೆಸಾರ್ಟ್ ಮೇಲೆ ನಗರಾಭಿವೃದ್ಧಿ ಪ್ರಾಧಿಕಾರ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ಜಂಟಿ ದಾಳಿ ನಡೆಸಿ ರೆಸಾರ್ಟ್‍ಗೆ ಬೀಗ ಹಾಕಿದ ಘಟನೆ ರವಿವಾರ ನಗರ ಸಮೀಪದ ಅಲ್ಲಂಪುರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಅಲ್ಲಂಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಅನಧಿಕೃತ ರೆಸಾರ್ಟ್ ಒಂದರ ಮೇಲೆ ದಿಢೀರ್ ದಾಳಿ ಮಾಡಿದ ಅಧಿಕಾರಿಗಳ ತಂಡ ಪರವಾನಿಗೆ, ಸೂಕ್ತ ದಾಖಲೆಗಳಿಲ್ಲದಿರುವುದನ್ನು ಪರಿಶೀಲಿಸಿ ರೆಸಾರ್ಟ್ ಬೀಗ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಅನಂದ್, ಸೆವೆಲ್ ಹಿಲ್ ರೆಸಾರ್ಟ್ ಇರುವ ಜಾಗ ಕೃಷಿ ಭೂಮಿಯಾಗಿದ್ದು, ಹಸಿರು ವಲಯದಲ್ಲಿದೆ. ಅಲ್ಲದೇ ಭೂ ಪರಿವರ್ತನೆಯನ್ನೂ ಮಾಡಿಲ್ಲ. ಜಾಗಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲಕರ ಬಳಿ ಸೂಕ್ತ ದಾಖಲೆಗಳೂ ಇಲ್ಲ. ಈ ಹಿಂದೆ ರೆಸಾರ್ಟ್ ಮಾಲಕರಿಗೆ ನೋಟಿಸ್ ನೀಡಿ ರೆಸಾರ್ಟ್ ಅನ್ನು ಮುಚ್ಚಿಸಲಾಗಿತ್ತು. ಆದರೆ ಮಾಲಕರು ರೆಸಾರ್ಟ್‍ನ ಮತ್ತೊಂದು ಗೇಟ್ ಮೂಲಕ ಗ್ರಾಹಕರನ್ನು ಆಹ್ವಾನಿಸಿ ಕೊಠಡಿಗಳನ್ನು ಬಾಡಿಗೆಗೆ ನೀಡಿ ವ್ಯವಹಾರವನ್ನು ಅಕ್ರಮವಾಗಿ ನಡೆಸುತ್ತಿದ್ದರು. ಅಕ್ರಮ ರೆಸಾರ್ಟ್ ಬಗ್ಗೆ ಸ್ಥಳೀಯ ಗ್ರಾಮಸ್ಥರಿಂದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ರವಿವಾರ ಜಂಟಿ ದಾಳಿ ನಡೆಸಿ ರೆಸಾರ್ಟ್‍ಗೆ ಬೀಗ ಹಾಕಲಾಗಿದೆ ಎಂದರು.
ಕೃಷಿ ಭೂಮಿಯಾಗಿರುವ ಹಿನ್ನೆಲೆಯಲ್ಲಿ ಕಳೆದ 1 ವರ್ಷದ ಹಿಂದೆ ಇದೇ ರೆಸಾರ್ಟ್ ಮಾಲಕರಿಗೆ ಎಚ್ಚರಿಕೆ ನೀಡಿ ರೆಸಾರ್ಟ್ ಆರಂಭಿಸಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ 1 ಕಳೆದ 1 ತಿಂಗಳ ಹಿಂದೆ ರಾತ್ರೋರಾತ್ರಿ ಜೆಸಿಬಿ ಮೂಲಕ ಕೆಲಸ ಮಾಡಿಸಿ ರೆಸಾರ್ಟ್ ಆರಂಭಿಸಿದ್ದಾರೆ. ಕಾನೂನು ಬದ್ಧವಾಗಿ ರೆಸಾರ್ಟ್ ನಡೆಸದೇ ಅಕ್ರಮವಾಗಿ ರೆಸಾರ್ಟ್ ಆರಂಭಿಸಿದ್ದಾರೆ. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದ್ದು, ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಅಕ್ರಮ ರೆಸಾರ್ಟ್‍ಗಳಿಂದಾಗಿ ಕಾನೂನು ಪ್ರಕಾರ ರೆಸಾರ್ಟ್ ನಡೆಸುತ್ತಿರುವವರಿಗೆ ತೊಂದರೆಯಾಗುತ್ತಿದೆ. ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ. ಇಂತಹ ರೆಸಾರ್ಟ್‍ಗಳಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಹೆಸರಿಗೆ ಕಳಂಕ ಬರುತ್ತಿದೆ. ಕಾನೂನಿನಂತೆ ರೆಸಾರ್ಟ್ ನಡೆಸಲು ಅವಕಾಶ ಇದ್ದರೂ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವುದು ವಿಪರ್ಯಾಸ. ಇಂತಹ ಅಕ್ರಮ ರೆಸಾರ್ಟ್‍ಗಳ ಬಗ್ಗೆ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿನಾಯಕ್ ಸಾಗರ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.