ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

Update: 2022-10-23 14:55 GMT

ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದ ಘಟನೆ ಸಂಬಂಧ ವಸತಿ ಮೂಲಸೌಕರ್ಯ ಮತ್ತು‌ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ (V Somanna) ರವಿವಾರ ಕ್ಷಮೆಯಾಚಿಸಿದ್ದಾರೆ.

ಶನಿವಾರ ಸಂಜೆ ಗುಂಡ್ಲುಪೇಟೆ ತಾಲೂಕಿನ ಹಂಗಳದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರ ಕಪಾಳಕ್ಕೆ ಸಚಿವರು ಹೊಡೆದ ಘಟನೆಯ  ವಿಡಿಯೋ ವೈರಲ್ ಆಗಿತ್ತು.

ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, "ಅದೊಂದು ಘಟನೆಯೇ ಅಲ್ಲ. ಆ ಹೆಣ್ಣು‌ಮಗಳು ಪದೇ ಪದೇ ವೇದಿಕೆ ಮೇಲೆ‌ ಬರುತ್ತಿದ್ದಳು. ನಿನ್ನ ಸಮಸ್ಯೆ‌ ಬಗೆಹರಿಸುತ್ತೇನೆಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆಯೇ ಹೊರೆತು ಬೇರಾವ ಉದ್ದೇಶವೂ ಇರಲಿಲ್ಲ. ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು‌ ಕಂಡಿದ್ದೇನೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನೂ ಮಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

"ನಾನು ಪ್ರತಿಯೊಬ್ಬರನ್ನು ಅಮ್ಮ, ತಾಯಿ ಎಂದೇ ಕರೆಯುತ್ತೇನೆ. ಆ ಹೆಣ್ಣು ಮಗಳಿಗೂ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಸೋಮಣ್ಣ ಹೇಳಿದ್ದಾರೆ.

ಸಚಿವರು ಮಹಿಳೆಯ ಕಪಾಳಕ್ಕೆ ಹೊಡೆದ ಘಟನೆಯ ವಿಡಿಯೋ ವೈರಲ್ ಆದ ಬಳಿಕ ವಿಪಕ್ಷ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಚಿವ ಸೋಮಣ್ಣ ಅವರ ರಾಜೀನಾಮೆಗೆ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ಕರ್ನಾಟಕವನ್ನು ಬಿಜೆಪಿಯ ಪ್ರಯೋಗಶಾಲೆ ಆಗಲು ಕಾಂಗ್ರೆಸ್ ಬಿಡುವುದಿಲ್ಲ: ರಾಹುಲ್ ಗಾಂಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News