ಓ ಮೆಣಸೇ...

Update: 2022-10-23 19:30 GMT

ಇಡೀ ಜಗತ್ತಿನಲ್ಲೇ ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶ - ಜೋ ಬೈಡನ್, ಅಮೆರಿಕ ಅಧ್ಯಕ್ಷ
 ನಿಮ್ಮ ಮಿತ್ರನಾಗಿರುವ ಯಾವ ದೇಶ ಅಪಾಯಕಾರಿ ಅಲ್ಲ ಹೇಳಿ?

ಭಾರತವನ್ನು ದ್ವೇಷ, ಹಿಂಸೆ, ನಿರುದ್ಯೋಗ ಮುಕ್ತ ಮಾಡುವುದೇ ಭಾರತ್ ಜೋಡೊ ಯಾತ್ರೆಯ ಉದ್ದೇಶ - ಬಿ.ಕೆ.ಹರಿಪ್ರಸಾದ್, ವಿ.ಪ. ನಾಯಕ
 ಕನಿಷ್ಠ ಕಾಂಗ್ರೆಸ್‌ನೊಳಗಿರುವ ನಿರುದ್ಯೋಗ ಅಳಿದರೂ ಭಾರತ್ ಜೋಡೊ ಸಾರ್ಥಕ.

ನಮಗೆ ಎಲ್ಲ ಪ್ರಾದೇಶಿಕ ಭಾಷೆಗಳು ಕೂಡಾ ರಾಷ್ಟ್ರೀಯ ಭಾಷೆಗಳಾಗಿವೆ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಹಾಗಿದ್ದರೆ ಉತ್ತರ ಭಾರತೀಯರು ಒಂದೆರಡು ಪ್ರಾದೇಶಿಕ ಭಾಷೆಗಳನ್ನು ಕಲಿಯಬಾರದೇ?
 
ಆತ್ಮ ಸಾಕ್ಷಾತ್ಕಾರದಿಂದ ಬ್ರಾಹ್ಮಣತ್ವ ಸಿಗುತ್ತದೆ ಹೊರತು ಜಾತಿಯಿಂದಲ್ಲ - ಬಾಬಾ ರಾಮ್‌ದೇವ್, ಯೋಗ ಗುರು
 ಪತಂಜಲಿ ಕಂಪೆನಿ ಆತ್ಮ ಸಾಕ್ಷಾತ್ಕಾರವನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ?

ಆರೆಸ್ಸೆಸ್‌ನ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ. ಅವರು ಆರೆಸ್ಸೆಸ್ ಬಗ್ಗೆ ಜ್ಞಾನ ಪಡೆದುಕೊಳ್ಳಬಹುದು - ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
 ಆರೆಸ್ಸೆಸ್‌ನ ಬಗ್ಗೆ ಜ್ಞಾನ ಪಡೆದುಕೊಂಡ ಬಳಿಕ ಅವರು ಟೀಕಿಸಲು ಶುರು ಮಾಡಿದ್ದು.

ನಾನು ರಾಹುಲ್ ಗಾಂಧಿಯಂತೆ ಪೆದ್ದನಲ್ಲ - ಶ್ರೀರಾಮುಲು, ಸಚಿವ
 ಹೌದು ದೇಶ ಒಡೆದು ಸುಲಭದಲ್ಲಿ ಮತ ಕೇಳುವ ದಾರಿ ಇರುವಾಗ ದೇಶ ಜೋಡಿಸಿ ಮತ ಕೇಳಲು ಹೊರಟಿರುವುದು ಪೆದ್ದುತನವೇ ಸರಿ.

ಭಾರತದ ರೂಪಾಯಿ ವೌಲ್ಯ ಕುಸಿಯುತ್ತಿಲ್ಲ, ಅಮೆರಿಕದ ಡಾಲರ್ ವೌಲ್ಯ ಏರಿಕೆ ಕಾಣುತ್ತಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
 ಭಾರತದಲ್ಲಿ ಹಸಿವು ಏರಿದ್ದು ಅಲ್ಲ, ನೇಪಾಳದಲ್ಲಿ ಹಸಿವು ಕುಸಿದದ್ದು ಎಂದು ಸಮರ್ಥಿಸಿದಂತೆ.

ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿವೆ. ಇದನ್ನು ತೊಲಗಿಸಿ ಆಡಳಿತ ಸೂತ್ರ ನೀಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ - ಡಿ.ವಿ.ಸದಾನಂದ ಗೌಡ, ಮಾಜಿ ಸಿಎಂ
 ನಿಮ್ಮ ರಕ್ತದಲ್ಲಿ ಇರುವುದರಿಂದಲೇ ನೀವು ಆರೆಸ್ಸೆಸ್ ಗುಲಾಮರಾಗಿರುವುದು.

ಮೀನು ಸಸ್ಯಾಹಾರಿ. ವಿದೇಶಗಳಲ್ಲಿ ಮೀನನ್ನು ಸಸ್ಯಾಹಾರಿ ಎಂದು ವ್ಯಾಖ್ಯಾನ ಮಾಡುತ್ತಾರೆ - ಬಸವರಾಜ್ ಬೊಮ್ಮಾಯಿ, ಸಿಎಂ
ವಿದೇಶದಲ್ಲಿ ಮೀನು ಮಾಂಸಾಹಾರಿ ಎಂದು ಗುರುತಿಸಲ್ಪಟ್ಟರೆ ಇಲ್ಲಿ ತಿನ್ನಲು ನಿಷೇಧ ಮಾಡುತ್ತೀರಾ ?

ಬಿಜೆಪಿ-ಕಾಂಗ್ರೆಸ್ ಭರಾಟೆ ಏನೇ ಇದ್ದರೂ ಜನರ ಒಲವು ಮಾತ್ರ ಜೆಡಿಎಸ್ ಪರ ಇದೆ - ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್ ಒಲವು ಬಿಜೆಪಿಯ ಪರವಾಗಿದೆಯೋ, ಕಾಂಗ್ರೆಸ್ ಪರವಾಗಿದೆಯೋ?

ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ನಾನು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸದೆ ಅವರ ಪರ ಕೆಲಸ ಮಾಡುತ್ತೇನೆ - ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ
ವರುಣಾ ಕ್ಷೇತ್ರದ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಅಪ್ಪನಿಗೆ ಬೆದರಿಕೆಯೇ?

ಮತಕ್ಕಾಗಿ ದಲಿತರನ್ನು ರಾಜಕಾರಣಿಗಳು ಒಡೆಯುತ್ತಿದ್ದಾರೆ - ಶ್ರೀನಿವಾಸ ಪ್ರಸಾದ್, ಸಂಸದ
ಒಡೆಯಿರಿ ಎಂದು ನೀವಾಗಿ ತಲೆಯನ್ನು ಒಪ್ಪಿಸಿದರೆ ಅವರು ಒಡೆಯದೆ ಇರುತ್ತಾರೆಯೇ?

ಕಾಶ್ಮೀರಿಗಳಿಗೆ ನ್ಯಾಯ ಸಿಗುವವರೆಗೂ ಪಂಡಿತರ ಹತ್ಯೆಗಳು ನಿಲ್ಲುವುದಿಲ್ಲ - ಫಾರೂಕ್ ಅಬ್ದುಲ್ಲಾ, ಕಾಶ್ಮೀರ ಮಾಜಿ ಸಿಎಂ
ಪಂಡಿತರ ಹತ್ಯೆಗಳಿಂದ ಕಾಶ್ಮೀರಿಗಳಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸುತ್ತೀರಾ?

ಸುರತ್ಕಲ್ ಟೋಲ್ ಗೇಟ್ ಸ್ಥಾಪನೆಯಾದಾಗ ಮೊದಲು ವಿರೋಧಿಸಿದ್ದು ನಮ್ಮ ಪಕ್ಷ - ನಳಿನ್ ಕುಮಾರ್ ಕಟೀಲು, ಸಂಸದ
ಈಗ ಯಾಕೆ ಬೆಂಬಲಿಸುತ್ತಿದ್ದೀರಿ? ಅದನ್ನು ಹೇಳಿ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆ ಕಾನೂನು ಪ್ರಕಾರ ನಡೆದಿದೆ - ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಅತ್ಯಾಚಾರವೇ ಕಾನೂನು ಪ್ರಕಾರ ನಡೆದಿದೆ ಎಂದು ಹೇಳಲಿಲ್ಲ, ಪುಣ್ಯ.

ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ವಿಚಾರದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ- ಎಂ.ಟಿ.ಬಿ.ನಾಗರಾಜ್, ಸಚಿವ
ಅಂದರೆ, ಅವರು ಶೋಷಿತ ಸಮುದಾಯಕ್ಕೆ ಸೇರಿರಬೇಕಾಗಿಲ್ಲ ಎಂದಾಯಿತು.

ಇಂಗ್ಲಿಷನ್ನು ಮನುಷ್ಯನ ಬುದ್ಧಿವಂತಿಕೆಯ ಮಾನದಂಡವಾಗಿ ನೋಡಬಾರದು - ನರೇಂದ್ರ ಮೋದಿ, ಪ್ರಧಾನಿ
ನಿಮಗೆ ಇಂಗ್ಲಿಷ್ ಗೊತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ?

ಸಾಂಘಿಕ ಪ್ರಯತ್ನದಿಂದ ನಾವು ಕಾಂಗ್ರೆಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ - ಶಶಿ ತರೂರು, ಕಾಂಗ್ರೆಸ್ ಮುಖಂಡ
ಕೇಸರಿ ಸಂಘದ ಬೆಂಬಲದಿಂದ ಎಂದು ಹೇಳುತ್ತಿರಬೇಕು

ಹಿಂದೆ ಭಾರತ ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಡುತ್ತಿತ್ತು. ಈಗ ಚೀತಾಗಳನ್ನು ಬಿಡುವ ಸಾಮರ್ಥ್ಯವನ್ನು ಹೊಂದಿದೆ - ನರೇಂದ್ರ ಮೋದಿ, ಪ್ರಧಾನಿ
ಅತ್ಯಾಚಾರ ಅಪರಾಧಿಗಳನ್ನು ಹೊರಬಿಡುತ್ತಿರುವುದು ಕೂಡ ಭಾರತದ ಸಾಧನೆಯೇ ಆಗಿದೆ.

ಸಚಿವ ಸ್ಥಾನ ಕೊಡಿ ಎಂದು ಕೇಳುವ ಸ್ವಭಾವ ನನ್ನದಲ್ಲ- ತಿಪ್ಪಾರೆಡ್ಡಿ, ಶಾಸಕ
ಕೊಡುವುದಿಲ್ಲ ಎನ್ನುವುದು ಖಚಿತವಾಗಿರುವಾಗ ಕೇಳಲು ಹೋಗಬಾರದು.

ಎಲ್ಲ ವರ್ಗದವರನ್ನು ಗುರುತಿಸಿ ಒಟ್ಟುಗೂಡಿಸಿಕೊಂಡು ಮೀಸಲಾತಿ ಕಲ್ಪಿಸಿರುವುದು ನಾನು ಮಾತ್ರ - ದೇವೇಗೌಡ, ಮಾಜಿ ಪ್ರಧಾನಿ
ತಮ್ಮ ಕುಟುಂಬದ ಎಲ್ಲ ವರ್ಗದವರನ್ನು ಗುರುತಿಸಿ ಎಂದರೆ ಸರಿಯಾಗುತ್ತದೆ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...