ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿಗೆ ಗುಂಡೇಟು
ಶಿವಮೊಗ್ಗ: ಯುವಕನ ಕೊಲೆ ಪ್ರಕರಣ ಸಂಬಂಧ ಮಹಜರ್ ಗೆ ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ವೆಂಕಟೇಶ ನಗರದಲ್ಲಿ ವರದಿಯಾಗಿದೆ.
ವೆಂಕಟೇಶ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ವಿಜಯ್ ಎಂಬಾತನ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು.
ಜಬಿ (23), ದರ್ಶನ್ (21) ಮತ್ತು ಕಾರ್ತಿಕ್ ಅಲಿಯಾಸ್ ಕಟ್ಟೆ (21) ಬಂಧಿತ ಆರೋಪಿಗಳು.
ಮಹಜರ್ ಗೆ ಹೋದಾಗ ಹಲ್ಲೆ: ವಿಜಯ್ ಕೊಲೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರಗಳನ್ನು ಶಿವಮೊಗ್ಗದ ಹೊಟೇಲ್ ಸಮೀಪ ತುಂಗಾ ಚಾನಲ್ ಬಳಿ ಬಚ್ಚಿಟ್ಟಿದ್ದರು. ಇವುಗಳನ್ನು ವಶಕ್ಕೆ ಪಡೆದು, ಸ್ಥಳ ಮಹಜರ್ ಮಾಡಲು ಪ್ರಮುಖ ಆರೋಪಿ ಜಬಿಯನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಹುದುಗಿಸಿ ಇಟ್ಟ ಮಾರಕಾಸ್ತ್ರಗಳನ್ನು ತೆಗೆದ ಆರೋಪಿ ಜಬಿ, ಜಯನಗರ ಠಾಣೆ ಸಿಬ್ಬಂದಿ ರೋಷನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆನ್ನಲಾಗಿದೆ. ಅದೃಷ್ಟವಶಾತ್ ರೋಷನ್ ತಪ್ಪಿಸಿಕೊಂಡಿದ್ದಾರೆ. ಆದರೆ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಈ ವೇಳೆ ಕುಂಸಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹರೀಶ್ ಪಟೇಲ್ ಅವರು ಆತ್ಮರಕ್ಷಣೆಗಾಗಿ ಜಬಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.
ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ರೋಷನ್ ಮತ್ತು ಗುಂಡೇಟಿನಿಂದ ಗಾಯಗೊಂಡಿರುವ ಜಬಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸ್ ಸಿಬ್ಬಂದಿ ರೋಷನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಅವರು ಇಟಲಿ ಮೂಲದವರೇ ಆಗಿರಬಹುದು, ಆದರೆ...: ಕುತೂಹಲ ಮೂಡಿಸಿದ ನಟಿ ರಮ್ಯಾ ಟ್ವೀಟ್