'ಊಟ ಕೊಡುವುದಿಲ್ಲ, ಕೇಳಿದರೆ ಕೆನ್ನೆಗೆ ಬಾರಿಸುತ್ತಾರೆ': ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳ ಆರೋಪ

ಚಿತ್ರದುರ್ಗ ಜಿಪಂ ಸಿಇಒ ಕಚೇರಿ ಮುಂಭಾಗ ಪ್ರತಿಭಟನೆ

Update: 2022-10-27 14:54 GMT

ಚಿತ್ರದುರ್ಗ, ಅ.27: ಸಮಸ್ಯೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳು ನಗರದ ಜಿಪಂ ಸಿಇಒ ಕಚೇರಿ ಮುಂಭಾಗ ತಮ್ಮ ಪೋಷಕರೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ನೂತನ ಸಿಇಒ ಎಂ.ಎಸ್.ದಿವಾಕರ್ ಅವರೊಂದಿಗೆ ಅಳಲು ತೋಡಿಕೊಂಡ ವಿದ್ಯಾರ್ಥಿಗಳು, ‘ಹಾಸ್ಟೆಲ್‌ನಲ್ಲಿ ಊಟ ಕೊಡುವುದಿಲ್ಲ, ಕೇಳಿದರೆ ಕೆನ್ನೆಗೆ ಬಾರಿಸುತ್ತಾರೆ. ಹೋಟೆಲ್‌ನಿಂದ ಊಟ ತರಿಸಿ ಕೊಡುತ್ತಾರೆ. ನಮ್ಮ ಸಮಸ್ಯೆಗಳನ್ನು ಕ್ರೀಡಾಧಿಕಾರಿಗಳ ಬಳಿ ಹೇಳಿದರೆ ಅವರು ಕೂಡ ನಿರ್ಲಕ್ಷ ವಹಿಸುತ್ತಾರೆ’ ಎಂದು ಆರೋಪಿಸಿದರು.

'ಕ್ರೀಡಾ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಸರಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಊಟ, ತಿಂಡಿ, ನಿದ್ರಿಸಲು ವ್ಯವಸ್ಥೆ, ಆಟದ ಮೈದಾನಕ್ಕೆ ಹೋದರೆ ಶ್ಯೂ, ಟ್ರಾಕ್ ಸೂಟ್‌ಗಳಿಲ್ಲದೆ ಆಟವಾಡಬೇಕಾದ ಪರಿಸ್ಥಿತಿ ಇದ್ದು, ಹೆಸರಿಗೆ ಮಾತ್ರ ಇದು ಕ್ರೀಡಾ ಹಾಸ್ಟೆಲ್ ಆಗಿದೆ. ಸರಕಾರದಿಂದ ಲಕ್ಷ ಲಕ್ಷ ರೂ. ಅನುದಾನ ಬರುತ್ತಿದ್ದು, ಅಧಿಕಾರಿಗಳ ನಿರ್ಲಕ್ಷದಿಂದ ಮಕ್ಕಳು ಬೀದಿಪಾಲಾಗಿದ್ದಾರೆ' ಎಂದು ಪೋಷಕರು ಸಿಇಒ ಬಳಿ ದೂರಿದರು.

'ಕ್ರೀಡಾ ಹಾಸ್ಟೆಲ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಯಾವೊಬ್ಬ ವಿದ್ಯಾರ್ಥಿಗೂ ಪರಿಪೂರ್ಣವಾಗಿ ಊಟ ಸಿಗುತ್ತಿಲ್ಲ. ಹಾಸ್ಟೆಲ್‌ನಲ್ಲಿ ಸೌಲಭ್ಯದ ಕೊರತೆ ಇದ್ದು, ಲೆಕ್ಕಕ್ಕುಂಟು ಆಟಕ್ಕಿಲ್ಲದಂತೆ ಅಧಿಕಾರಿಗಳು ಬಂದು ಹೋಗುತ್ತಿದ್ದಾರೆ. ಅಲ್ಲಿರುವ ವಾಚ್‌ಮೆನ್ ಒಬ್ಬರು ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಆದರೂ ಸಂಬಂಧಿಸಿದ ಕ್ರೀಡಾ ಅಧಿಕಾರಿ ವಿಜಯಲಕ್ಷ್ಮೀ ಎಂಬವರು ಒಂದೇ ಒಂದು ದಿನ ಬಂದು ವಿದ್ಯಾರ್ಥಿಗಳ ಅಳಲು ಕೇಳಿಲ್ಲ. ಕ್ರೀಡಾಧಿಕಾರಿ ಜಿಲ್ಲೆಗೆ ವರ್ಗಾವಣೆಯಾಗಿ ಬಂದ ನಂತರ ಆಟದ ಮೈದಾನ ಸೇರಿದಂತೆ ಇಡೀ ಇಲಾಖೆಯೇ ಸಂಪೂರ್ಣವಾಗಿ ಅಸ್ಥವ್ಯಸ್ಥಗೊಂಡಿದ್ದು, ಸರಿಪಡಿಸುವಲ್ಲಿ ನಿರ್ಲಕ್ಷ ವಹಿಸಿದ್ದಾರೆ' ಎಂದು ಪೋಷಕರು ಆರೋಪಿಸಿದರು.

ಮಕ್ಕಳ ಮೇಲಾಗಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ಪೋಷಕರು, ಸಂಬಂಧಿಸಿದ ಅಧಿಕಾರಿಗಳು ಹಣದಾಸೆಗಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ. ಬೇಕಾಬಿಟ್ಟಿಯಾಗಿ ಊಟ ತರಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದ ಆಹಾರವನ್ನು ತರಿಸಿಕೊಡುವಲ್ಲಿ ಕ್ರೀಡಾ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕ್ರೀಡಾ ಹಾಸ್ಟೆಲ್‌ನಲ್ಲಿ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿಕೊಂಡು ಬರಲಾಗಿದ್ದು, ಸರಿಯಾದ ಊಟ, ವಸತಿ, ಸ್ವಚ್ಛತೆ, ಬಟ್ಟೆ ವ್ಯವಸ್ಥೆ, ಶೂ ವ್ಯವಸ್ಥೆ, ಸೂಕ್ತ ರೀತಿಯಲ್ಲಿ ವಿದ್ಯಾಭ್ಯಾಸ ನೀಡುತ್ತಿರುವ ಬಗ್ಗೆ ಕೊರತೆ ಕಂಡುಬರುತ್ತಿದೆ. ಇದನ್ನು ಸರಿಪಡಿಸುವಲ್ಲಿ ಕ್ರೀಡಾಧಿಕಾರಿಯವರು ವಿಫಲರಾಗಿದ್ದು, ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕೆಂದು ವಿದ್ಯಾಥಿಗರ್ಳ ಪೋಷಕರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಿಇಒ, ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಇವತ್ತಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ವಿಚಾರಣೆ ಮಾಡಿದ ನಂತರ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Similar News