ಸಂತ್ರಸ್ತ ಬಾಲಕಿಯರ ಪರ ಸಲ್ಲಿಕೆಯಾಗಿರುವ ಆಕ್ಷೇಪಣೆ ಕುರಿತ ಸಿಂಧುತ್ವ ಪ್ರಶ್ನಿಸಿದ ಮುರುಘಾ ಶ್ರೀ

ಲೈಂಗಿಕ ಕಿರುಕುಳ ಪ್ರಕರಣ

Update: 2022-10-28 13:19 GMT

ಬೆಂಗಳೂರು, ಅ.28: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀ ಹೈಕೋರ್ಟ್‍ಗೆ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯರ ಪರ ಸಲ್ಲಿಕೆಯಾಗಿರುವ ಆಕ್ಷೇಪಣೆ ಕುರಿತ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ.

ಮುರುಘಾ ಶರಣರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸಂತ್ರಸ್ಥೆಯ ಪರವಾಗಿ ಮಣಿ ಎಂಬುವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿರುವ ಶರಣರ ಪರ ವಕೀಲರು, ಸಂತ್ರಸ್ತ ಬಾಲಕಿಗೆ ತಂದೆ, ತಾಯಿಯವರು ಆಕ್ಷೇಪಣೆ ಸಲ್ಲಿಸಬೇಕು. 

ಆದರೆ, ಮಣಿ ಹೆಸರಿನವರು ಆಕ್ಷೇಪಣೆ ಸಲ್ಲಿಸಿದ್ದು, ಇದನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಸಂತ್ರಸ್ತ ಬಾಲಕಿಯರು ಒಪ್ಪಿಗೆ ನೀಡಿರುವ ಬಗ್ಗೆ ಅಧಿಕೃತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅವರು ಪೀಠಕ್ಕೆ ವಿವರಿಸಿದರು. ಈ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸಬೇಕಾಗಿದೆ. ಇದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.

ಮುರುಘಾ ಮಠದ ಅಧೀನದಲ್ಲಿರುವ ವಸತಿ ಶಾಲೆಯ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮುರುಘಾ ಶ್ರೀಗಳನ್ನು  ಪೊಲೀಸರು 2022ರ ಸೆ.1ರಂದು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದರು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರು ಜಾಮೀನು ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. 

Similar News