ಎಲ್ಲ ರಾಜ್ಯಗಳಲ್ಲಿ JDS ಶಾಸಕರು ಇರಬೇಕು: ಎಚ್.ಡಿ.ದೇವೇಗೌಡ

Update: 2022-10-28 16:59 GMT

ಬೆಂಗಳೂರು, ಅ.28: ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಮ್ಮ ಕಾರ್ಯಕರ್ತರು ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ನಮ್ಮ ಪಕ್ಷದ ಶಾಸಕರು ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಶುಕ್ರವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷದ  ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿದ್ದಕ್ಕೆ ಕಾರ್ಯಕಾರಿಣಿ ಸಮಿತಿಗೆ ಧನ್ಯವಾದ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೆ ಬರುತ್ತದೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದುವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದೆ. ಇಂದು ಮಹಾ ಅಧಿವೇಶನದಲ್ಲಿ 3 ನಿರ್ಣಯ ಅಂಗೀಕಾರವಾಗಿದೆ. ಕಾರ್ಯಕ್ರಮಕ್ಕೆ ಬಂದಿರುವ ಕೇರಳ ಮಂತ್ರಿಗಳಿಗೂ ಧನ್ಯವಾದ ಸಲ್ಲಿಸುತ್ತೇನೆ. ಇದೊಂದು ಅತ್ಯುತ್ತಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ. ಕಾಂಗ್ರೆಸ್-ಬಿಜೆಪಿ ಬಗ್ಗೆ ಚರ್ಚೆ ಬೇಡ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅವರು ಹೇಳಿದರು.

ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನತಾ ಜಲಧಾರೆ ಮಾಡಿದ್ದರು. ಇವೆಲ್ಲವೂ ಜನರ ಅಭಿವೃದ್ಧಿ ಕಾರ್ಯಕ್ರಮಗಳು. ನಾವೆಲ್ಲರೂ ಪಕ್ಷ ಕಟ್ಟುವ ಕೆಲಸ ಮಾಡೋಣ. ಪ್ರತಿ ರಾಜ್ಯದ ಒಂದು ಕ್ಷೇತ್ರದಲ್ಲಾದರೂ ಒಬ್ಬರಾದರೂ ನಮ್ಮ ಶಾಸಕರು ಇರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ದೇವೇಗೌಡ ಕರೆ ನೀಡಿದರು. 

ಇದನ್ನೂ ಓದಿ: JDS ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್‌.ಡಿ.ದೇವೇಗೌಡ ಅವಿರೋಧ ಆಯ್ಕೆ

Similar News