'ತಳವಾರ-ಪರಿವಾರ ನಾಯಕ' ಜಾತಿಗಳನ್ನು ಹಿಂ.ವರ್ಗಗಳ ಪಟ್ಟಿಯಿಂದ ತೆಗೆದು ಹಾಕಿದ ಸರಕಾರ
Update: 2022-10-29 19:35 IST
ಬೆಂಗಳೂರು, ಅ.29: ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಮಿಸಲಾತಿ ಪಟ್ಟಿಯಲ್ಲಿದ್ದ ‘ತಳವಾರ’ ಹಾಗೂ ‘ಪರಿವಾರ ನಾಯಕ’ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದು ಹಾಕಿ ಶನಿವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ತಳವಾರ ಸಮಾಜದ ಹೋರಾಟ ಸಮಿತಿಯ ಮುಖಂಡ ರಾಜೇಂದ್ರ ರಾಜವಾಳ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆಯೂ ಎಸ್ಟಿ ಪ್ರಮಾಣ ಪತ್ರ ನೀಡುವುದಾಗಿ ಹೇಳಿ ಮಾತು ತಪ್ಪಿದರು. ಇದು ಕೇವಲ ಹೆಸರಿಗೆ ಮಾತ್ರ ಮಾಡಿರುವ ಆದೇಶ ಎಂಬ ಅನುಮಾನವಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ, ಸಾಂಕೇತಿಕವಾಗಿ ತಳವಾರದ ಕೆಲವರಿಗೆ ಎಸ್ಟಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಚಾಲನೆ ನೀಡಬೇಕು. ಇಲ್ಲದಿದ್ದಲ್ಲಿ, ಈ ಆದೇಶ ಪಾಲನೆ ಆಗುವುದಿಲ್ಲ. ಮುಖ್ಯಮಂತ್ರಿ ಸಾಂಕೇತಿಕವಾಗಿ ಪ್ರಮಾಣ ಪತ್ರ ನೀಡುವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.