86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ, ಹಾವೇರಿ ನಗರಕ್ಕೆ ದೀಪಾಲಂಕಾರ: ಸಚಿವ ಶಿವರಾಮ ಹೆಬ್ಬಾರ್

Update: 2022-10-29 16:37 GMT

ಬೆಂಗಳೂರು, ಅ. 29: 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ಜ.6, 7 ಮತ್ತು 8ರಂದು ನಡೆಯಲಿದ್ದು, ಸಮ್ಮೇಳನದ ಲಾಂಛನ ಬಿಡುಗಡೆ ಮಾಡಲಾಗಿದೆ. ದಸರಾ ವೇಳೆ ಮೈಸೂರು ನಗರಕ್ಕೆ ದೀಪಾಲಂಕಾರ ಮಾಡಿದಂತೆ ಸಮ್ಮೇಳನ ನಡೆಯುವ ದಿನಗಳಂದು ಹಾವೇರಿ ನಗರಕ್ಕೆ ದೀಪಾಲಂಕಾರ ಮಾಡಲಾಗುವುದು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ಶನಿವಾರ ನಗರದಲ್ಲಿ 86ನೇ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿ ಅವರು, ಸಮ್ಮೇಳನ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಸುಮಾರು 25 ಸಾವಿರ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಮೂರು ದಿನಗಳ ಕಾಲ ಪ್ರತಿನಿತ್ಯ 3ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುವ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಗಳಿಗಾಗಿ ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿರುವ ಸುಮಾರು 21 ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಸಮ್ಮೇಳನಕ್ಕೆ ಸಿದ್ದತೆ ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿಗಳು ಸಭೆಗಳನ್ನು ನಡೆಸಲಾಗುತ್ತಿದೆ. ಅದ್ದೂರಿಯಾಗಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಎರಡು ವರ್ಷಗಳ ಕಾಲ ಕೊರೊನ ಸೋಂಕಿನ ಕಾರಣದಿಂದಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಗಿತಗೊಂಡಿತ್ತು. ಈ ಭಾರಿ ಅದ್ಧೂರಿಯಾಗಿ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಸಮ್ಮೇಳನಕ್ಕೆ ಐದು ಸಾವಿರ ಸ್ವಯಂ ಸೇವಕರ ಬಳಕೆಗೆ ಚಿಂತನೆ ಮಾಡಲಾಗಿದೆ. ಸಮ್ಮೇಳನಕ್ಕೆ ನಿಗದಿಪಡಿಸಿದಂತೆ ಈಗಾಗಲೇ 20 ಕೋಟಿ ರೂ.ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಸಾಪ ಅಧ್ಯಕ್ಷ ಡಾ.ಮಹೇಶ ಜೋಷಿ, ಶಾಸಕ ನೆಹರೂ ಓಲೆಕಾರ್ ಸೇರಿದಂತೆ ಕಸಾಪ ಜಿಲ್ಲಾ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Similar News