ಶಾಲಾ ಮಕ್ಕಳ ಅಪಹರಣಕ್ಕೆ ವಿಫಲ ಯತ್ನ: ಪ್ರಕರಣ ದಾಖಲು

Update: 2022-10-29 17:14 GMT

ತುಮಕೂರು/ಹುಳಿಯಾರು, ಅ.29: ಶಾಲೆ ಮುಗಿಸಿ ಮನೆಗೆ ಹಿಂದಿರುಗುವಾಗ ಕಾರಿನಲ್ಲಿ ಬಂದ ಕೆಲ ಅಪರಿಚಿತರು ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಿರುವ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರದ ಬಳಿ ಶನಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಪ್ರತಿ ದಿನದಂತೆ ಬೆಳ್ಳಾರ ಸೇತುವೆ ಬಳಿ ಇರುವ ಸರಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಶನಿವಾರದ ಬೆಳಗ್ಗಿನ ಕ್ಲಾಸ್ ಮುಗಿಸಿಕೊಂಡು ತಮ್ಮ ಊರು ಬೆಳ್ಳಾರ ಮೇಗಲಗೊಲ್ಲರಹಟ್ಟಿಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಮಕ್ಕಳು ನಡೆದುಕೊಂಡು ಹೋಗುವಾಗ ಕಪ್ಪುಕಾರನ್ನು ಮಕ್ಕಳ ಬಳಿ ನಿಲ್ಲಿಸಿ ಮುಸುಕುಧಾರಿಗಳಿಬ್ಬರು ಇಳಿದು ಮಕ್ಕಳ ಕೈ ಹಿಡಿದು ಎಳೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿರೋಧ ತೋರಿ ಕೈ ಬಿಡಿಸಿಕೊಂಡಾಗ ಪಕ್ಕದ ಮುಳ್ಳಿನ ಪೊದೆಗೆ ಮಕ್ಕಳು ಬಿದ್ದಿರುವುದನ್ನು ಕಂಡು ಅಪರಿಚಿತರು ಕಾರು ಹತ್ತಿ ಚಿಕ್ಕನಾಯಕನಹಳ್ಳಿ ಕಡೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಲೋಹಿತ್ ಮತ್ತು ಹರ್ಷಿತ್ ಎಂಬ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ತರಚು ಗಾಯಗಳಾಗಿವೆ. ಅಲ್ಲದೆ ಕಾರಿನಲ್ಲಿ ಇನ್ನೂ ಮೂವರು ಮಕ್ಕಳಿದ್ದಾರೆ ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದಾರಿ ಹೋಕರಾದ ಬಸವರಾಜು ಎಂಬವರಿಗೆ ಮಕ್ಕಳು ವಿಷಯ ಮುಟ್ಟಿಸಿದಾಗ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಕ್ಕಳಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯ ಜೀವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್‌ಕುಮಾರ್ ಸಹ ಸ್ಥಳಕ್ಕೆ ಆಗಮಿಸಿ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ. ರಸೆ್ತ ಬದಿ ಮುಳಿ್ಳ

''ಬೆಳ್ಳಾರ ಮೇಗಲಗೊಲ್ಲರಹಟ್ಟಿಯಿಂದ ಅನೇಕ ವಿದ್ಯಾರ್ಥಿಗಳು ಬೆಳ್ಳಾರ ಸೇತುವೆ ಹತ್ತಿದ ಶಾಲೆಗೆ ನಿತ್ಯ 1.5 ಕಿಮೀ ದೂರ ಬೆಳಗ್ಗೆ ಸಂಜೆ ನಡೆದುಕೊಂಡು ಹೋಗುತ್ತಾರೆ. ಈ ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನಗಿಡಗಳು ರಸ್ತೆಗೆ ಚಾಚಿಕೊಂಡು ಬೆಳೆದು ನಿಂತಿದೆ. ಈ ಗಿಡಗಳ ಮರೆಯಲ್ಲಿ ಮಕ್ಕಳನ್ನು ಅಪಹರಣ ಮಾಡಿದರೂ,ಅತ್ಯಾಚಾರ ಮಾಡಿದರೂ ಯಾರಿಗೂ ತಿಳಿಯದು. ಹಾಗಾಗಿ ಹಲವು ಭಾರೀ ಪಿಡಬ್ಲೂಡಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತೆರವಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಈಗಲಾದರೂ ಎಚ್ಚೆತ್ತು ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ತೆರವು ಮಾಡಲಿ''.

  -ಬಸವರಾಜು, ಸ್ಥಳೀಯರು

Similar News