ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಓರ್ವ ಸ್ವಾಮೀಜಿ, ಯುವತಿ ಸಹಿತ ಮೂವರ ಬಂಧನ

Update: 2022-10-30 08:41 GMT

ರಾಮನಗರ, ಅ.30: ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್​ (Honeytrap) ಮಾಡಿಸಿದ್ದ ಆರೋಪದಲ್ಲಿ ಮೂವರನ್ನು ರಾಮನಗರ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.

ಬಂಧಿತರನ್ನು ಕಣ್ಣೂರು ಮಠದ ಡಾ.ಮೃತ್ಯುಂಜಯಶ್ರೀ ಸ್ವಾಮೀಜಿ, ದೊಡ್ಡಬಳ್ಳಾಪುರ ಮೂಲದ ಯುವತಿ ನೀಲಾಂಬಿಕೆ ಅಲಿಯಾಸ್ ಚಂದು(21) ಹಾಗೂ ನಿವೃತ್ತ ಶಿಕ್ಷಕ, ವಕೀಲ ಮಹದೇವಯ್ಯ ಎಂದು ಗುರುತಿಸಲಾಗಿದೆ. ವೈರಲ್ ಆಗಿದ್ದ  ಬಂಡೆಮಠದ ಸ್ವಾಮೀಜಿಯದ್ದೆನ್ನಲಾದ ಹನಿಟ್ರ್ಯಾಪ್ ವೀಡಿಯೋದಲ್ಲಿರುವ ಯುವತಿ ನೀಲಾಂಬಿಕೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಕಣ್ಣೂರು ಮಠದ ಡಾ.ಮೃತ್ಯುಂಜಯಶ್ರೀ ಸ್ವಾಮೀಜಿಯು ಪೂರ್ವಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಂಡೆಮಠದ ಸ್ವಾಮೀಜಿಯ ಸೋದರ ಸಂಬಂಧಿ ಎನ್ನಲಾಗಿದೆ. ಇವರೊಳಗೆ ಅದ್ಯಾವುದೋ ವಿಚಾರದಲ್ಲಿ ವೈಮನಸ್ಸಿದ್ದು, ಇದೇ ಕಾರಣಕ್ಕೆ ಬಂಡೆಮಠದ ಸ್ವಾಮೀಜಿಯ ತೇಜೋವಧೆ ಮಾಡಲು ಆರೋಪಿಗಳು ಸೇರಿ ಹನಿಟ್ರ್ಯಾಪ್ ಸಂಚು ಹೂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ರವಿವಾರ(ಅ.23) ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಪಾಪುರದ ಬಂಡೆಮಠದ ಆವರಣದಲ್ಲಿರುವ ಪೂಜಾ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಂಡೆಮಠದ ಸ್ವಾಮೀಜಿಯ ಮೃತದೇಹ ಪತ್ತೆಯಾಗಿತ್ತು. ಸ್ವಾಮೀಜಿಯ ಮೃತದೇಹವಿದ್ದ ಜಾಗದಲ್ಲಿ ಪೊಲೀಸರಿಗೆ ಸ್ವಾಮೀಜಿ ಬರೆದಿದ್ದ ಪುಟಗಳ ಡೆತ್ ನೋಟ್ ಸಿಕ್ಕಿದ್ದು,  ಅದರಲ್ಲಿ ತಮ್ಮ ಮೇಲೆ ನಿರಂತರ ಕಿರುಕುಳ ಮಾಡಿ ತಮ್ಮ ಚಾರಿತ್ರ್ಯಕ್ಕೆ ಧಕ್ಕೆ ತರಲು ಕೆಲವರು ಯತ್ನಿಸಿದ್ದಾರೆ. ನನ್ನ ಮಾನ ಕಳೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆಗೆ  ರಾಮನಗರ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದು, ತನಿಖೆ ತೀವ್ರಗೊಳಿಸಿದ್ದರು. ಈ ನಡುವೆ ಮಹಿಳೆಯ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತುಕತೆ ನಡೆಸುವ ಬಂಡೆಮಠದ ಸ್ವಾಮೀಜಿ ಅವರದ್ದೆನ್ನಲಾದ 2-3  ವೀಡಿಯೋಗಳು ವೈರಲ್ ಆಗಿತ್ತು. ಇದರ ಜಾಡು ಹಿಡಿದು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸ್ವಾಮೀಜಿಯನ್ನು ಹನಿಟ್ರ್ಯಾಪ್ ಗೆ ಒಳಪಡಿಸಿ ಬೆದರಿಸಿರುವುದು ತಿಳಿದುಬಂದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Similar News