ಭಗತ್ ಸಿಂಗ್ ಪಾತ್ರ ಅಭ್ಯಾಸದ ವೇಳೆ ಆಕಸ್ಮಿಕವಾಗಿ ನೇಣಿನ ಕುಣಿಕೆಗೆ ಸಿಲುಕಿ ವಿದ್ಯಾರ್ಥಿ ಮೃತ್ಯು

Update: 2022-10-30 13:54 GMT

ಚಿತ್ರದುರ್ಗ(Chitradurga): ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ (Bhagat Singh) ನೇಣಿಗೇರುವ ನಾಟಕದ ಪಾತ್ರದ ಅಭ್ಯಾಸದ ವೇಳೆ ಆಕಸ್ಮಿಕವಾಗಿ ನೇಣಿನ ಕುಣಿಕೆಗೆ ಸಿಲುಕಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ನಾಗರಾಜ್ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರ ಸಂಜಯ್ ಗೌಡ (12) ಎಂದು ಗುರುತಿಸಲಾಗಿದೆ.

ನವೆಂಬರ್ 1ರಂದು ರಾಜ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜಯ್, ಭಗತ್ ಸಿಂಗ್ ಪಾತ್ರ ಮಾಡಬೇಕಿತ್ತು. ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ವಿದ್ಯಾರ್ಥಿ ಸಂಜಯ್ ನಗರದ ಎಸ್.ಎಲ್.ವಿ. ಶಿಕ್ಷಣ ಸಂಸ್ಥೆಯಲ್ಲಿ 7ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ವಿದ್ಯಾರ್ಥಿ ಶನಿವಾರ ರಾತ್ರಿ ಮನೆಯಲ್ಲಿ ಪೋಷಕರು ಇಲ್ಲದೆ ವೇಳೆ ಭಗತ್ ಸಿಂಗ್ ಪಾತ್ರದ ಅಭ್ಯಾಸ ಮಾಡುತ್ತಿದ್ದನು. ನೇಣಿಗೆ ಕೊರಳೊಡ್ಡುವ ಸಂದರ್ಭದ ಅಭಿನಯಕ್ಕಾಗಿ ಫ್ಯಾನಿಗೆ ಹಗ್ಗ ಕಟ್ಟಿಕೊಂಡಿದ್ದು, ಸ್ಟೂಲ್ ಮೇಲೆ ನಿಂತು ಮುಖವನ್ನು ಟೋಪಿಯಿಂದ ಮುಚ್ಚಿಕೊಂಡು ಅಭ್ಯಾಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಟೂಲ್ ಜಾರಿ ವಿದ್ಯಾರ್ಥಿ ಸಂಜಯ್ ನೇಣಿನ ಕುಣಿಕೆಗೆ ಸಿಲುಕು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಪೋಷಕರು ಮನೆಗೆ ಹಿಂದಿರುಗಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಏಳು ತಿಂಗಳಿನಿಂದ ಕೋಮಾದಲ್ಲಿರುವ ಮಹಿಳೆ

Similar News