ಕೆಂಪೇಗೌಡರ ಹೆಸರಿನಲ್ಲಿ ಬಿಜೆಪಿ ಸರಕಾರದಿಂದ ರಾಜಕೀಯ: ಎಚ್.ಡಿ. ಕುಮಾರಸ್ವಾಮಿ ಆರೋಪ

Update: 2022-10-30 16:39 GMT

ಬೆಂಗಳೂರು, ಅ.30: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಹೆಸರಿನಲ್ಲಿ ಬಿಜೆಪಿಯವರು ಸ್ವಂತ ಕಾರ್ಯಕ್ರಮ ಮಾಡಿಕೊಂಡು, ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ರವರ ಕಚೇರಿಯಲ್ಲಿ ವಿವಿಧ ಪಕ್ಷ ತೊರೆದು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಥಯಾತ್ರೆ ಮುಖಾಂತರ ಮಣ್ಣನ್ನು ಶೇಖರಣೆ ಮಾಡುತ್ತಿದ್ದಾರೆ. ಇದು ರಾಜಕೀಯವಾಗಿ ಜನರನ್ನು ಸೆಳೆಯುವ ಕಾರ್ಯಕ್ರಮ ಆಗುತ್ತಿದೆ. ನಮ್ಮ ಸಮಾಜದ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.

ರಥಯಾತ್ರೆ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಹಾಕಿದ್ದಾರೆ. ನಮ್ಮ ಸಮಾಜದ ಸ್ವಾಮೀಜಿಗಳ ಭಾವಚಿತ್ರ ಇಲ್ಲ. ನಮ್ಮ ಸಮುದಾಯ ಹಿರಿಯರಾದ ಹೆಚ್.ಡಿ ದೇವೇಗೌಡರು, ಎಸ್.ಎಂ.ಕೃಷ್ಣ ಅವರ ಭಾವಚಿತ್ರ ಇಲ್ಲ. ಅವರಿಗೆ ಅಗೌರವ ತೋರಿಸುವ ಮೂಲಕ ಬಿಜೆಪಿಯ ಕಾರ್ಯಕ್ರಮ ಮಾಡಿಕೊಂಡು ಹೊರಟ್ಟಿದ್ದಾರೆ. ಹೀಗಾಗಿ, ದಾಸರಹಳ್ಳಿ, ತಿಪಟೂರು, ದೇವನಹಳ್ಳಿ, ಹೊಸಕೋಟೆ ಸೇರಿದಂತೆ ಹಲವು ಕಡೆ ಬಿಜೆಪಿ ರಥಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರಕಾರ ಸಣ್ಣತನದ ವಾತಾವರಣ ನಿರ್ಮಾಣ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಎಎಪಿ ಹಾಗೂ ಇತರೆ ಪಕ್ಷದ ಮುಖಂಡರು ಜೆಡಿಎಸ್ ಸೇರ್ಪಡೆ ಆಗುತ್ತಿದ್ದು, ಅವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವುದಾಗಿ ಕುಮಾರಸ್ವಾಮಿ ಹೇಳಿದರು.  

ರಥಯಾತ್ರೆ ವಾಹನದಲ್ಲಿ ಭಾವಚಿತ್ರ ಕೈಬಿಟ್ಟು ಸಮಾಜದ ಸ್ವಾಮೀಜಿಗಳು, ಎಚ್‍ಡಿಡಿ, ಎಸ್.ಎಂ.ಕೃಷ್ಣ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. 

Similar News