ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ಕಾಂಗ್ರೆಸ್ ಸಂಚು: ಸಚಿವ ಆರ್. ಅಶೋಕ್

Update: 2022-10-30 17:19 GMT

ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರನ್ನು ಗುರಿಯಾಗಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದ್ದಾರೆ.

ರವಿವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಪ್ರಭಾವಶಾಲಿ ಎನಿಸಿದ್ದ ಮುದ್ರಣ ಮಾಧ್ಯಮವನ್ನು ಗುರಿಯಾಗಿ ಇಟ್ಟುಕೊಂಡಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಡೀ ಪತ್ರಕರ್ತರನ್ನು ಜೈಲಿಗೆ ಅಟ್ಟಿದ ಕಳಂಕ ಕಾಂಗ್ರೆಸ್ ಮೇಲಿದೆ. ಇವತ್ತು ಅದೇ ಧಾಟಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹೊರಟಿರುವುದು ಹೇಡಿತನದ ಪರಮಾವಧಿ ಎಂದು ಟೀಕಿಸಿದರು.

ಇದು ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್‍ನ ಸಂಚು ಎಂದು ಆಕ್ಷೇಪಿಸಿದ ಅವರು, ಒಂದು ರೀತಿ ಬ್ಲ್ಯಾಕ್‍ಮೇಲ್ ನಡೆದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಕಾರ್ಯಕ್ಕಾಗಿ ರಶ್ಯ ಸೇರಿ ಹಲವು ದೇಶಗಳ ಮುಖಂಡರು ಹೊಗಳಿದ್ದಾರೆ. ಇಂಗ್ಲೆಂಡ್ ಪ್ರಧಾನಿಯೂ ಉತ್ತಮ ಬಾಂಧವ್ಯ ಹೊಂದುವುದಾಗಿ ತಿಳಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಮೋದಿಯವರ ಕಾರ್ಯಕ್ರಮಗಳು ದಿನನಿತ್ಯ ಹೆಚ್ಚಾಗಿ ಪ್ರಸಾರ ಆಗುತ್ತಿರುವ ಕೊರಗು ಕೂಡ ಇದಕ್ಕೆ ಕಾರಣ ಎಂದು ತಿಳಿಸಿದರು. 

ಮಾಧ್ಯಮದವರಿಗೆ ಇರುಸು ಮುರುಸುಂಟು ಮಾಡುವ ಕೆಲಸ: ಸಚಿವ ಡಾ.ಕೆ. ಸುಧಾಕರ್ ಅವರು ಮಾತನಾಡಿ, ಇವತ್ತು ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಲ್‍ಪಿ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎರಡು ವಿಷಯಗಳ ಕುರಿತು ಆಪಾದನೆ ಮಾಡಿದ್ದಾರೆ. ದೀಪಾವಳಿ ಹಬ್ಬದ ಉಡುಗೊರೆ ಕುರಿತು ಉಲ್ಲೇಖಿಸಿ ಸಿಎಂ ಅವರನ್ನು ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಮಾಧ್ಯಮದವರ ವೃತ್ತಿ ಬದುಕಿಗೆ ಇರುಸು ಮುರುಸುಂಟು ಮಾಡುವ ಕೆಲಸ ಮಾಡಿದ್ದಾರೆ ಎಂದು ಎಂದು ಆರೋಪಿಸಿದರು. 

Similar News