ಬಿಲ್ ಪಾವತಿಗೆ 40 ಶೇ. ಕಮಿಷನ್ ಬೇಡಿಕೆ ಆರೋಪ: ಗುತ್ತಿಗೆದಾರನಿಂದ ದಯಾಮರಣ ಕೋರಿ ಅರ್ಜಿ

ಕೋವಿಡ್ ಪರಿಕರಗಳನ್ನು ಪೂರೈಸಿದ್ದ ಹುಬ್ಬಳ್ಳಿಯ ಬಸವರಾಜ ಅಮರಗೋಳ

Update: 2022-10-31 07:35 GMT

ಹುಬ್ಬಳ್ಳಿ, ಅ.31: ಗ್ರಾಮ ಪಂಚಾಯತ್ ಗಳಿಗೆ ಪೂರೈಸಿದ್ದ ಕೋವಿಡ್-19 ಪರಿಕರಗಳ ಬಿಲ್ ಪಾವತಿಯನ್ನು ಅಧಿಕಾರಿಗಳು ಶೇ.30-40ರಷ್ಟು ಕಮಿಷನ್ (30-40% commission) ಬೇಡಿಕೆ ಮುಂದಿಟ್ಟು ತಡೆ ಹಿಡಿದಿದ್ದಾರೆ. ಈಗ ತಾನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತನಾಗಿದ್ದೇನೆ. ಆದ್ದರಿಂದ ತನಗೆ ದಯಾಮರಣ(Kindness Of Death) ಕ್ಕೆ ಅವಕಾಶ ನೀಡಬೇಕು ಎಂದು ನಗರದ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿಯ ಸುಳ್ಳ ರಸ್ತೆ ಮನೋಜ್ ಪಾರ್ಕ್ ನಿವಾಸಿ ಗುತ್ತಿಗೆದಾರ ಬಸವರಾಜ ಅಮರಗೋಳ ಎಂಬವರು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

2021ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪತ್ರದ ಅನುಸಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾ.ಪಂ.ಗಳಿಗೆ 85 ಲಕ್ಷ ರೂ. ಹಾಗೂ ಮೂಡಿಗೆರೆ ತಾಲೂಕಿಗೆ 27 ಲಕ್ಷ ರೂ.ಗಳ ಕೋವಿಡ್ ಪರಿಕರಗಳನ್ನು ಪೂರೈಸಿದ್ದೇನೆ. ಈ ಸಂಬಂಧ ಕೇವಲ 20 ಶೇ. ಮಾತ್ರ ಬಿಲ್ ಪಾವತಿಯಾಗಿದೆ. ಉಳಿದ ಮೊತ್ತದ ಬಿಲ್ ಎರಡು ವರ್ಷಗಳಾಗುತ್ತಾ ಬಂದರೂ ಮಂಜೂರು ಆಗಿಲ್ಲ. ಬಿಲ್ ಪಾವತಿಗೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯ ಕಾರ್ಯಾಲಯ ಹಾಗೂ ಪಂಚಾಯತ್‌ರಾಜ್ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಕೂಡಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೂ ಅಧಿಕಾರಿಗಳು ಬಿಲ್ ಮಂಜೂರು ಮಾಡಿಲ್ಲ. ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಈ ಬಗ್ಗೆ ದೂರು ಸಲ್ಲಿಸಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಬಿಲ್ ವಿಚಾರವಾಗಿ ಚಿಕ್ಕಮಗಳೂರು ಜಿಪಂ ಸಿಇಒ, ಕಡೂರು ಮತ್ತು ಮೂಡಿಗೆರೆ ತಾಲೂಕಿನ ಇಒ ಅವರನ್ನು ಸಂಪರ್ಕಿಸಿದ್ದೇನೆ. ಕೆಲವು ಪಿಡಿಒಗಳು ಹಲವು ಕಾರಣಗಳನ್ನು ನೀಡಿ ಬಿಲ್ ಪಾವತಿಗೆ ಸಮ್ಮತಿಸುತ್ತಿಲ್ಲ ಎಂದು ಇಒ ಹೇಳಿದ್ದಾರೆ. ಈ ವಿಚಾರವಾಗಿ ಪಿಡಿಒ ಅವರನ್ನು ನೇರವಾಗಿ ಸಂಪರ್ಕಿಸಿದಾಗ ಕೆಲವು ಪಿಡಿಒಗಳು ಬೇರೆ ಬೇರೆ ಹೆಸರಲ್ಲಿ ಶೇ.30-40 ಕಮಿಷನ್ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಬಸವರಾಜ ಅಮರಗೋಳ ಆರೋಪಿಸಿದ್ದಾರೆ.

ಎರಡು ವರ್ಷಗಳಿಂದ ಬಿಲ್ ವಿಚಾರವಾಗಿ ಅಲೆದಾಡಿ, ಸಾಲಗಾರರ ಕಾಟದಿಂದ ಬೇಸತ್ತು ಹೋಗಿದ್ದು, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತನಾಗಿದ್ದೇನೆ. ಮನೆ ಬಾಡಿಗೆ, ಬ್ಯಾಂಕ್ ಸಾಲ, ತೆರಿಗೆ ಇತ್ಯಾದಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ನನಗೆ ಕೋವಿಡ್ ಪರಿಕರಗಳನ್ನು ಸರಬರಾಜು ಮಾಡಿರುವ ಕಂಪೆನಿದಾರ ಬಾಕಿ ಮೊತ್ತ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾನೆ. ಆದ್ದರಿಂದ ತನಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಗುತ್ತಿಗೆದಾರ ಹುಬ್ಬಳ್ಳಿಯ ಬಸವರಾಜ ಅಮರಗೋಳ ಅವರು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.  

ಇದನ್ನೂ ಓದಿ: ಮೋದಿ, ಶಾ ನನಗೂ ಹರೇನ್ ಪಾಂಡ್ಯ ರೀತಿ ಮಾಡಲಾರರು ಎಂದು ಹೇಳಿದ ಸುಬ್ರಮಣ್ಯನ್ ಸ್ವಾಮಿ!

Similar News