ಪಟೇಲ್ ಜಯಂತಿಗೆ ಅಮಿತ್ ಶಾ ಮುಖ್ಯ ಅತಿಥಿ: ಸರ್ದಾರ್ ಪಟೇಲ್ ವಿದ್ಯಾಲಯದ ಮಾಜಿ ವಿದ್ಯಾರ್ಥಿಗಳಿಂದ ವಿರೋಧ

Update: 2022-10-31 11:59 GMT

ಹೊಸದಿಲ್ಲಿ: ಸರ್ದಾರ್ ಪಟೇಲ್ ಜಯಂತಿಯಂದು  ದಿಲ್ಲಿಯ ಸರ್ದಾರ್ ಪಟೇಲ್ ವಿದ್ಯಾಲಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಕ್ರಮವನ್ನು ಪ್ರಶ್ನಿಸಿ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳ ಒಂದು ಗುಂಪು ಬಹಿರಂಗ ಪತ್ರ ಬರೆದಿದೆ.

ಸಂಸ್ತೆಯ ಪ್ರಾಂಶುಪಾಲೆ ಅನುರಾಧ ಜೋಷಿ ಹಾಗೂ ಸಂಸ್ಥೆಯನ್ನು ನಡೆಸುವ ಗುಜರಾತ್ ಎಜುಕೇಶನ್ ಸೊಸೈಟಿಯನ್ನುದ್ದೇಶಿಸಿ ಈ ಪತ್ರ ಬರೆಯಲಾಗಿದೆ.

"ಪ್ರಸ್ತುತ ಧ್ರುವೀಕರಣದ ವಾತಾವರಣದಲ್ಲಿ ಅವರಂತಹ ರಾಜಕಾರಣಿಯನ್ನು ಆಹ್ವಾನಿಸುವುದು ವಿದ್ಯಾಲಯವನ್ನು ಟೀಕಿಸುವುದಕ್ಕೆ ಕಾರಣವಾಗುವುದರ ಜೊತೆಗೆ ಸಂವಿಧಾನ ಮತ್ತು ಬಹುತ್ವಕ್ಕೆ ಒತ್ತು ನೀಡುವ ಸಂಸ್ಥೆಯ ಆಶಯಗಳನ್ನು ಗೌಣವಾಗಿಸಬಹುದು" ಎಂದು ಪತ್ರದಲ್ಲಿ ಬರೆಯಲಾಗಿದೆ.

"ಪ್ರಶ್ನಿಸುವ, ಅಸಮ್ಮತಿ ವ್ಯಕ್ತಪಡಿಸುವ ಪ್ರಜಾಸತ್ತಾತ್ಮಕ ಸಿದ್ಧಾಂತವನ್ನು, ಚರ್ಚೆ ಹಾಗೂ ಸಂವಾದವನ್ನು ಉತ್ತೇಜಿಸುವ ಸಂಸ್ಥೆ ನಮ್ಮದು" ಎಂದು ಪತ್ರ ವಿವರಿಸಿದೆ.

"ಸರ್ದಾರ್ ಪಟೇಲ್ ಅವರು ಶಾ ಅವರು ಸದಸ್ಯರಾಗಿರುವ ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ಆರೆಸ್ಸೆಸ್ ಅನ್ನು ನಿಷೇಧಿಸಿದವರಾಗಿದ್ದರು. ಆದುದರಿಂದ ಪಟೇಲ್ ಅವರ ಪರಂಪರೆಯ ಮೇಲೆ ಹಕ್ಕು ಸ್ಥಾಪಿಸುವ ಬಿಜೆಪಿಯ ಯತ್ನಗಳ ಹೊರತಾಗಿಯೂ  ಅವರಿದ್ದಿದ್ದರೆ ಇಂದು ರೀತಿಯ ರಾಜಕಾರಣವನ್ನು ಅವರು ಒಪ್ಪುತ್ತಿರಲಿಲ್ಲ" ಎಂದು ಪತ್ರ ಹೇಳಿದೆ.

ಸಂಸ್ಥೆಯ 230 ಕ್ಕೂ ಹೆಚ್ಚು ಮಾಜಿ ವಿದ್ಯಾರ್ಥಿಗಳು ಈ  ಪತ್ರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

Similar News