ಕಂದಾಯ ನ್ಯಾಯಾಲಯಗಳ ಅಧಿಕಾರ ವಿಕೇಂದ್ರೀಕರಣ: ಸಚಿವ ಆರ್.ಅಶೋಕ್

Update: 2022-10-31 16:05 GMT

ಬೆಂಗಳೂರು, ಅ. 31: ‘ಭೂ ವಿವಾದಗಳು ಸೇರಿದಂತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕಂದಾಯ ನ್ಯಾಯಾಲಯಗಳ ಅಧಿಕಾರ ವಿಕೇಂದ್ರಿಕರಣಕ್ಕೆ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ 2 ವರ್ಷದಿಂದ ಕಂದಾಯ ನ್ಯಾಯಾಲಯಗಳ ಕಲಾಪ ಸ್ಥಗಿತವಾಗಿತ್ತು. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಜನರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ತಹಸಿಲ್ದಾರ್‍ಗಳ ನ್ಯಾಯಾಲಯ ವಿಚಾರಣೆ ಮಾಡಿ ತ್ವರಿತ ಇತ್ಯರ್ಥಕ್ಕೆ ನಿರ್ಧರಿಸಲಾಗಿದೆ’ ಎಂದರು.

‘ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಇದುವರೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಬಗೆಹರಿಸುತ್ತಿದ್ದ ಪ್ರಕರಣಗಳ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಇತ್ಯರ್ಥಗೊಳಿಸುತ್ತಾರೆ. ಹಾಗೆಯೇ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತಿದ್ದ ಪ್ರಕರಣಗಳ ವಿಚಾರಣೆಯನ್ನು ಭೂ ಸ್ವಾಧೀನಾಧಿಕಾರಿಗಳ ಮಟ್ಟದ ಅಧಿಕಾರಿಗಳು ನಡೆಸುತ್ತಾರೆ. ತಹಸಿಲ್ದಾರ್ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗುತ್ತಿದ್ದ ಪ್ರಕರಣಗಳ ವಿಚಾರಣೆಯನ್ನು ಉಪತಹಸಿಲ್ದಾರ್ ಇತ್ಯರ್ಥಪಡಿಸಲಿದ್ದಾರೆ’ ಎಂದು ಅಶೋಕ್ ಮಾಹಿತಿ ನೀಡಿದರು.

‘ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವ ಜತೆಗೆ ಪ್ರತಿ ತಿಂಗಳು ನಿರ್ದಿಷ್ಟ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲೇಬೇಕು ಎಂದು ಗುರಿ ನಿಗದಿ ಮಾಡುತ್ತಿದ್ದೇವೆ. ಹೀಗಾಗಿ ಕಂದಾಯ ನ್ಯಾಯಾಲಯಗಳ ಮುಂದಿರುವ ಪ್ರಕರಣಗಳು ತ್ವರಿತ ವಿಲೇವಾರಿಯಾಗಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

‘ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡರೆ ನಿರ್ದಿಷ್ಟ ಕಾಲಾವಧಿಯೊಳಗಾಗಿ ಅಂತಿಮ ತೀರ್ಪು ನೀಡಲೇಬೇಕೆಂದು ಗಡುವು ವಿಧಿಸಲಾಗುವುದು. ಇದರಿಂದಜನ ಸಾಮಾನ್ಯರಿಗೆ ಅನುಕೂಲವಾಗಲಿದ್ದು, ಪ್ರಕರಣಗಳು ತ್ವರಿತ ವಿಲೇಯಿಂದ ಹೊರೆ ತಗ್ಗಲಿದೆ’ ಎಂದು ಅವರು ಹೇಳಿದರು.

ಹಕ್ಕುಪತ್ರ: ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮತ್ತು ಆ ಗ್ರಾಮಗಳಿಗೆ ಹೆಸರು ಕೊಡುವ ಕಾರ್ಯ ನವೆಂಬರ್ ಅಂತ್ಯ ಇಲ್ಲವೆ ಡಿಸೆಂಬರ್ ಮೊದಲ ವಾರ ಯಾದಗಿರಿಯಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ರಾಜ್ಯದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯಲಿದೆ. ಒಟ್ಟು ಆರು ಲಕ್ಷ ಲಂಬಾಣಿ ಕುಟುಂಬಗಳಿದ್ದು ಅವರಿಗೆ ಜಾಗ, ಗುರುತು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. 

Similar News