ಮಾಲೂರು ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಆರೋಪಿಗಳಿಗೆ ಪೊಲೀಸರಿಂದಲೇ ಸಹಕಾರ: ಆರೋಪ
ಕೋಲಾರ: ಇತ್ತೀಚೆಗೆ ಮಾಲೂರು ತಾಲೂಕಿನ ಮೈಲಾಂಡಹಳ್ಳಿಯ ಮಲ್ಲೇಶ್ ಟೈಲ್ಸ್ ಫ್ಯಾಕ್ಟರಿಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಗೆ ಸಹಕರಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ರಾಜ್ಯಾಧ್ಯಕ್ಷ ಐ. ಆರ್. ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ''ಕಳೆದ ಅಕ್ಟೋಬರ್ ತಿಂಗಳ 11ರಂದು ಮಾಲೂರಿನ ಮೈಲಾಂಡಹಳ್ಳಿಯಲ್ಲಿರುವ ಕೇರಳ ಮೂಲದ ಮಲ್ಲೇಶ್ ಮಾಲಿಕತ್ವದ ಹಂಚಿನ ಕಾರ್ಖಾನೆಯಲ್ಲಿ ಸ್ಥಳೀಯ ಕಾರ್ಮಿಕರನ್ನು ಹೊಡೆಸುತ್ತಿರುವ ಬಗ್ಗೆ ಮೈಲಾಂಡಹಳ್ಳಿ ಗ್ರಾಮದ ಬ್ಯಾಟಪ್ಪ ಎಂಬುವವರಿಗೆ ಫೋನ್ ಕರೆ ಮಾಡಿದ ಹಿನ್ನೆಲೆ ಬ್ಯಾಟಪ್ಪ ಮತ್ತು ಇತರೆ ನಾಲ್ಕು ಜನ ಸಹಾಯಕ್ಕೆ ಹೋದಾಗ ಮಾಲೀಕ ಮಲ್ಲೇಶ್ ಕೇರಳ ಮೂಲದ ಕಾರ್ಮಿಕರಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ'' ಎಂದು ತಿಳಿಸಿದರು.
''ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ, ಗಾಯಾಳುಗಳಿಂದ ಸಿ. ಆರ್.ಪಿ.ಸಿ.170 ರ ಪ್ರಕಾರ ನಮೂನೆ 29ರಲ್ಲಿ ಪೊಲೀಸರು ಸಹಿ ಮಾಡಿಸಿಕೊಂಡು ಆರೋಪಿಗಳ ವಿರುದ್ಧ ತಮ್ಮಲ್ಲಿ ಎಲ್ಲಾ ಸಾಕ್ಷಿಗಳು ಇದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಆರೋಪಿಗಳಿಗೆ ಜಾಮೀನು ಪಡೆಯಲು ಸಹಕರಿಸಿದ್ದಾರೆ'' ಎಂದು ದಲಿತ ಮುಖಂಡ ಐ. ಆರ್. ನಾರಾಯಣ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.