ಪೊಲೀಸ್​ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-11-01 10:20 GMT

ತುಮಕೂರು: 'ಪೊಲೀಸ್​ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ. 

ಜಿಲ್ಲಾಡಳಿತದ ವತಿಯಿಂದ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ಏರ್ಪಡಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ,ಧ್ವಜಾರೋಹಣ ನೆರವೇರಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

''ಪೊಲೀಸ್​ ನೇಮಕಾತಿ  ವಯೋಮಿತಿ ಹಚ್ಚಳ ಮಾಡಬೇಕೆಂದು ಬಹಳ ದಿನಗಳಿಂದ ಒತ್ತಡವಿದೆ. ಈ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ'' ಎಂದು ಭರವಸೆ ನೀಡಿದರು.

''ಹೊಸ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಮುಂದೂಡಲಾಗಿದೆ. ಪೊಲೀಸ್ ಇಲಾಖೆಗೆ ಸಣ್ಣ ವಯಸ್ಸಿನವರ ನೇಮಕಾತಿ ಆಗಬೇಕು. ಅದು ಇಲಾಖೆಯ ಒಟ್ಟಾರೆ ಕಾರ್ಯನಿರ್ವಹಣೆಗೆ ಒಳ್ಳೆಯದು ಎಂಬ ಚಿಂತನೆಯಿದೆ'' ಎಂದರು.

''ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಅಧಿವೇಶನದಲ್ಲಿ ಸಮಗ್ರ ಕನ್ನಡ ಭಾಷೆಯ ಅಭಿವೃದ್ಧಿಗೆ ವಿಧೇಯಕವನ್ನು ಮಂಡಿಸಿದ್ದಾರೆ.ಕರ್ನಾಟಕದಲ್ಲಿ ಉದ್ಯಮವನ್ನು ಆರಂಭಿಸುವಂತಹ ಪ್ರತಿಯೊಬ್ಬ ಉದ್ಯಮಿಯು ಸಹ ತನ್ನ ಉದ್ಯಮದಲ್ಲಿ ಶೇ.70ರಷ್ಟು ಹುದ್ದೆಗಳನ್ನು ಅರ್ಹ ಕನ್ನಡಿಗರಿಗೆ ನೀಡಬೇಕು ಎಂಬಂತಹ ನಿಯಮ ಮಾಡಲಾಗಿದೆ'' 

- ಆರಗ ಜ್ಞಾನೇಂದ್ರ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು

Similar News