ರಾಮಜನ್ಮಭೂಮಿ ಪ್ರಕರಣದ ತೀರ್ಪಿನ ವಿರುದ್ಧ ಪ್ರತಿಭಟಿಸುವುದು 'ಧರ್ಮಗಳ ನಡುವೆ ದ್ವೇಷ ಪ್ರೋತ್ಸಾಹಿಸಿದಂತೆ': ಹೈಕೋರ್ಟ್

Update: 2022-11-01 11:23 GMT

 ಹೊಸದಿಲ್ಲಿ: ಸುಪ್ರೀಂ ಕೋರ್ಟ್ 2019 ರಲ್ಲಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದು ಧರ್ಮದ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ಮಂಗಳೂರು ಪ್ರದೇಶದಲ್ಲಿ ದ್ವೇಷವನ್ನು ಪ್ರೋತ್ಸಾಹಿಸಿದಂತೆ, ಇಂತಹ ಪ್ರತಿಭಟನೆಗಳನ್ನು ಹಗುರವಾಗಿ ಪರಿಗಣಿಸುವ ಹಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪೊಂದರಲ್ಲಿ ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದೇ ಅಲ್ಲದೆ ಘೋಷಣೆಗಳನ್ನು ಮೊಳಗಿಸಿದ್ದಕ್ಕಾಗಿ ತನ್ನ ಹಾಗೂ ಐದು ಮಂದಿ ಇತರರ ವಿರುದ್ಧ ದಾಖಲಿಸಲಾಗಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಸಫ್ವಾನ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮೇಲಿನ ಆದೇಶವನ್ನು ಅಕ್ಟೋಬರ್ 14 ರಂದು ಹೊರಡಿಸಲಾಗಿದೆ.

ಅರ್ಜಿದಾರ  ಸೆಪ್ಟೆಂಬರ್ ತಿಂಗಳಿನಲ್ಲಿ  ಪಿಎಫ್‍ಐ ಜೊತೆಗೆ ನಿಷೇಧಕ್ಕೊಳಗಾದ ಅದರ ವಿದ್ಯಾರ್ಥಿ ಘಟಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸದಸ್ಯನೆಂದು ಆರೋಪಿಸಲಾಗಿದ್ದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರಿನ ಕೊಣಾಜೆ ಪೊಲೀಸರು ಅಥಾವುಲ್ಲಾ, ಇಮ್ರಾನ್, mಮುಹಮ್ಮದ್ ಆಸಿಫ್, ಮುಹಮ್ಮದ್ ರಿಯಾಝ್ ಮತ್ತು ಸಫ್ವಾನ್ ಸಹಿತ ಆರು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 153(ಎ), 149 ಹಾಗೂ ಕರ್ನಾಟಕ  ತೆರೆದ ಪ್ರದೇಶಗಳ ವಿರೂಪ ಕಾಯಿದೆ 1951 ಮತ್ತು 1981 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಮಂಗಳೂರಿನ ಬದ್ರಿಯಾ ಜುಮ್ಮಾ ಮಸೀದಿ ಸಮೀಪ ಅಬ್ಬಾಸ್ ಎಂಬವರ ಮನೆಯ ಎದುರು 'ಕೆಲ ಪಿಎಫ್‍ಐಗೆ ಸೇರಿದ ಮಂದಿ' ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು  ಗಸ್ತಿನಲ್ಲಿರುವಾಗ 'ನಂಬಲರ್ಹ ಮಾಹಿತಿ' ಪೊಲೀಸ್ ಕಾನ್‍ಸ್ಟೇಬಲ್ ಅಶೋಕ್ ಕುಮಾರ್ ಅವರಿಗೆ ದೊರಕಿತ್ತು ಎಂಬ ಕುರಿತೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ಗುಂಪು ಮಂಗಳೂರು ವಿವಿ ಕ್ಯಾಂಪಸ್ ಪ್ರವೇಶಿಸಿ ಸುಪ್ರೀಂ ತೀರ್ಪಿನ ವಿರುದ್ಧ ಘೋಷಣೆ ಕೂಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

Similar News