ಪಿಎಸ್‌ಐ ಅಭ್ಯರ್ಥಿಗಳಿಗೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ?: ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಆಕ್ರೋಶ

Update: 2022-11-01 14:04 GMT

ಬೆಂಗಳೂರು: 'ಪಿಎಸ್‌ಐ ಹಗರಣದ ಸಂತ್ರಸ್ತರನ್ನು ಎದುರುಗೊಂಡು ಅವರ ನೋವನ್ನು ಆಲಿಸಲು ಧೈರ್ಯವಿಲ್ಲದೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ?' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಈ ಕುರಿತ ವಿಡಿಯೋ ಒಂದನ್ನು ಹಂಚಿಕೊಂಡಿದೆ. 

''PSI ಅಕ್ರಮದಿಂದ ಸಂತ್ರಸ್ತರಾದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ ತುಮಕೂರು ಡಿವೈಎಸ್ಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಭ್ಯರ್ಥಿಗಳನ್ನು ಭೇಟಿಯಾಗಲು, ಅವರ ನೋವು ಆಲಿಸಲು ಹಿಂದೇಟು ಹಾಕುವುದೇಕೆ? ಅವರ ಸಮಸ್ಯೆಗೆ ಇದುವರೆಗೂ ಪರಿಹಾರ ಸೂಚಿಸದಿರುವುದೇಕೆ? ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ'' ಎಂದು ಗೃಹಸಚಿವರನ್ನು ಕಾಂಗ್ರೆಸ್ ಒತ್ತಾಯಿಸಿದೆ.

ಇನ್ನೊಂದು ವಿಡಿಯೋ ಹಂಚಿಕೊಂಡಿರುವ ಕಾಂಗ್ರಸ್,  ''ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಾಗ ಗೃಹಸಚಿವರ ಉಡಾಫೆ, ದುರಹಂಕಾರದ ನಡವಳಿಕೆ ಇದು'' ಎಂದು ಕಿಡಿಕಾರಿದೆ.

''ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಉದ್ಯೋಗಕ್ಕಾಗಿ ಪರಿತಪಿಸುವ ಯುವಜನರಿಗೆ ನಿಮ್ಮ ಸ್ಪಂದನೆ ಇದೇನಾ? ಈ ದರ್ಪ, ದೌಲತ್ತುಗಳು ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ'' ಎಂದು ಕಾಂಗ್ರೆಸ್ ಎಚ್ಚರಿಸಿದೆ. 

Similar News