ರಾಜ್ಯದಲ್ಲಿ ಇನ್ನೂ 3 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Update: 2022-11-03 16:26 GMT

ಬೆಂಗಳೂರು, ನ.3: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇನ್ನೂ 3 ದಿನ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಮಲೆನಾಡು, ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ನ.4ರಿಂದ 6ರ ವರೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಜಡಿ ಮಳೆ ಶುರುವಾಗಿದೆ. 

ಸಿಲಿಕಾನ್ ಸಿಟಿಯಲ್ಲಿ ಮೈಕೊರೆಯುವ ಚಳಿಯ ತೀವ್ರತೆಗೆ ಜನರು ಗಡಗಡ ನಡುಗುವಂತಾಗಿದ್ದು, ತಾಪಮಾನದಲ್ಲಿಯೂ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ. ನ.4ರಿಂದ 6ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು. ಈ ಹಿನ್ನೆಲೆಯಲ್ಲಿ ಬೆಂಗಳೂರು, ಕೊಡಗು, ಶಿವಮೊಗ್ಗ, ಕೋಲಾರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. 

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ನ.4ರಿಂದ 7ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಸುರಿದ ಮಳೆ: ಬುಧವಾರ, ಗುರುವಾರ ಬೆಳಗ್ಗೆ 8.30ರ ವರೆಗೆ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Similar News