‘ದಾಹಮುಕ್ತ ಕರ್ನಾಟಕ ಯೋಜನೆ’ಗೆ ಶೀಘ್ರದಲ್ಲೇ ಚಾಲನೆ: ಸಚಿವ ಬಿ.ಎ.ಬಸವರಾಜು

Update: 2022-11-03 17:13 GMT

ಬೆಂಗಳೂರು, ನ. 3: ‘ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ 7,620 ಕೋಟಿ ರೂ.ಮೊತ್ತದ ‘ದಾಹಮುಕ್ತ ಕರ್ನಾಟಕ ಯೋಜನೆ’ಗೆ ಶೀಘ್ರದಲ್ಲೇ ಪ್ರಧಾನಿ ಚಾಲನೆ ನೀಡಲಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯೋಜನೆಯ ಮೂಲಕ ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಕುಡಿಯುವ ನೀರು ಒದಗಿಸುವುದು ನಮ್ಮ ಉದ್ದೇಶ. ಈ ಯೋಜನೆಯಿಂದ ನಗರ ಪ್ರದೇಶಗಳ ನೀರಿನ ದಾಹ ಇಂಗಲಿದೆ. ಜಲಜೀವನ್ ಮಿಷನ್ ಯೋಜನೆಯ ಮೂಲಕ ಹಳ್ಳಿಗಾಡಿನ ದಾಹ ತೀರಲಿದೆ’ ಎಂದು ಹೇಳಿದರು.

‘ಎರಡು ತಿಂಗಳಲ್ಲಿ ಯೋಜನೆಗೆ ಸಂಬಂಧಿಸಿದ ಟೆಂಡರ್‍ಪ್ರಕ್ರಿಯೆ ಆರಂಭಗೊಳ್ಳಲಿದ್ದು ಅಮೃತ್-2 ಅಡಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ನ.11ಕ್ಕೆ ಕೆಂಪೇಗೌಡರ ಪ್ರಗತಿ ಪ್ರತಿಮೆಯ ಉದ್ಘಾಟನೆ ಸಮಾರಂಭಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಅಂದೇ ಅಮೃತ್-2 ಅಡಿಯಲ್ಲಿ ಕರ್ನಾಟಕವನ್ನು ದಾಹಮುಕ್ತಗೊಳಿಸುವ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲು ಕೋರಲಾಗಿದೆ’ ಎಂದು ತಿಳಿಸಿದರು.

‘ನದಿ ಮೂಲಗಳಿಂದ ನಗರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ರೂಪುರೇಷೆ ಸಿದ್ಧಗೊಂಡಿದ್ದು, ತ್ವರಿತವಾಗಿ ಜಾರಿಗೆ ಬರಲಿದೆ. ಆ ಮೂಲಕ ಕರ್ನಾಟಕದ ದಾಹ ಇಂಗಲಿದೆ. ಯೋಜನೆಗೆ ಕೇಂದ್ರ ಶೇ.50, ಉಳಿದ ಶೇ.50ರಷ್ಟು ರಾಜ್ಯ ಸರಕಾರವೇ ಭರಿಸಲಿದೆ ಎಂದು ಅವರು ವಿವರಿಸಿದರು. 

Similar News