ತುಮಕೂರು | ಕಂದಾಯ, ನರೇಗಾ ಹಣ ದುರುಪಯೋಗ ಆರೋಪ; ಪಿಡಿಒ ಸೇವೆಯಿಂದ ವಜಾ

Update: 2022-11-04 13:03 GMT

ತುಮಕೂರು.ನ.04: ನರೇಗಾ ಹಣ ದುರುಪಯೋಗ ಹಾಗೂ ಕಂದಾಯ ವಸೂಲಿ ಹಣ ಸ್ಪಂತಕ್ಕೆ ಬಳಕೆ ಸೇರಿದಂತೆ ಕೊಡಿಗೇನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ನಡೆಸಿದ್ದ ಪಿಡಿಒ ನಾಗರಾಜು ಅವರನ್ನು ವೆಯಿಂದ ವಜಾಗೊಳಿಸಿ, 65 ಲಕ್ಷರೂಗಳನ್ನು ಸರಕಾರಕ್ಕೆ ಮರು ಪಾವತಿಸುವಂತೆ ಸಿಇಒ ಡಾ.ಕೆ.ವಿದ್ಯಾಕುಮಾರಿ ಆದೇಶ ಮಾಡಿದ್ದಾರೆ.

ಕೊಡಿಗೇನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ನಾಗರಾಜು ಅವರು, ಗ್ರಾಮಪಂಚಾಯಿತಿ ವತಿಯಿಂದ ಸಂಗ್ರಹವಾಗುವ ಕಂದಾಯದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ನರೇಗಾ ಯೋಜನೆಯಲ್ಲಿ ಕೆಲಸವನ್ನೇ ಮಾಡದೆ ಬಿಲ್ ಪಾವತಿಸಿ ಹಣ ಪಡೆದಿರುವ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತರಾಯಪ್ಪ ಸಿಇಓಗೆ ದಾಖಲೆಗಳೊಂದಿಗೆ ದೂರು ನೀಡಿದ್ದರು. ಸದರಿ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ  ಮಧುಗಿರಿ ತಾಲೂಕು ಪಂಚಾಯತ್ ಮುಂಭಾಗ ಸೂಕ್ತ ತನಿಖೆ ನಡಸುವಂತೆ ವೇದಿಕೆವತಿಯಿಂದ ಮೂರು ದಿನಗಳ ಕಾಲ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಈ ವಿಚಾರವಾಗಿ ಸಮಗ್ರ ತನಿಖೆ ನಡೆಸಿದ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರು, ಕೊಡಿಗೇನಹಳ್ಳಿ ಪಿಡಿಒ ನಾಗರಾಜು ಸುಮಾರು 65 ಲಕ್ಷ ರೂಗಳ ಅವ್ಯವಹಾರ ನಡೆಸಿರುವುದು ಕಂಡು ಬಂದ ಹಿನ್ನೇಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿರುವುದಲ್ಲದೆ, ಸರಕಾರಕ್ಕೆ 65 ಲಕ್ಷರೂ ಹಣ ಪಾವತಿಸುವಂತೆ ಆದೇಶ ಮಾಡಿದ್ದಾರೆ.

Similar News