2 ವರ್ಷಗಳಲ್ಲಿ 8ಸಾವಿರ ಟನ್‍ಗೂ ಅಧಿಕ ಪ್ರಮಾಣದ ಮೀನು ಉತ್ಪಾದನೆಗೆ ಕ್ರಮ: ಸಚಿವ ಎಸ್.ಅಂಗಾರ

Update: 2022-11-04 15:08 GMT

ಬೆಂಗಳೂರು, ನ. 4: ‘ರಾಜ್ಯದಲ್ಲಿ ಮೀನಿನ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ 8ಸಾವಿರ ಟನ್‍ಗೂ ಅಧಿಕ ಪ್ರಮಾಣದ ಮೀನು ಉತ್ಪಾದನೆ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ’ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರಸ್ತುತ 6ಸಾವಿರ ಟನ್ ಮೀನುಗಳಿಗೆ ಬೇಡಿಕೆ ಇದೆ. ಆದರೆ, 4 ಸಾವಿರ ಟನ್‍ಗಳಷ್ಟು ಮಾತ್ರ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಬೇಡಿಕೆ ನೀಗಿಸಲು ಆಂಧ್ರ ಮತ್ತು ತಮಿಳುನಾಡು ರಾಜ್ಯಗಳ ಮೇಲೆ ಅವಂಬಿಸಲಾಗಿದೆ’ ಎಂದು ಹೇಳಿದರು.

‘ಮೀನಿನ ಕೊರತೆ ನೀಗಿಸಲು ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ’ ಎಂದ ಅಂಗಾರ, ರಾಜ್ಯದಲ್ಲಿ ಮೀನಿನ ಖಾದ್ಯಗಳಿಗೆ ಬೇಡಿಕೆ ಇದ್ದು, ಪೂರೈಕೆಯ ಕೊರತೆ ನೀಗಿಸಲು ಸರಕಾರ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದೆ’ ಎಂದು ಹೇಳಿದರು.

‘ಇತ್ತೀಚೆಗಷ್ಟೇ ಮೀನುಗಾರರ ಸಮಾವೇಶ ನಡೆಸಲಾಗಿದ್ದು, ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಮ್ಮೇಳನ ಏರ್ಪಡಿಸಲಾಗುವುದು. ಕೆರೆ, ಹೊಂಡಗಳಲ್ಲಿ ಮೀನು ಸಾಕಾಣಿಕೆಗೆ ಆದ್ಯತೆ ನೀಡಲಾಗುವುದು. ಮೀನು ಕೃಷಿಗೆ ಸಹಾಯ ಕೋರಿ ಅರ್ಜಿ ಸಲ್ಲಿಸಿದವರಿಗೆ ನೆರವು ನೀಡುವುದು. ಉಚಿತವಾಗಿ ಮೀನು ಮರಿಗಳನ್ನು ಪೂರೈಕೆ ಮಾಡಲಾಗುವುದು ಎಂದು ಅಂಗಾರ ತಿಳಿಸಿದರು.

‘ದೊಡ್ಡ ಪ್ರಮಾಣದಲ್ಲಿ ಮೀನು ಕೃಷಿ ಮಾಡುವವರಿಗೆ ಇಲಾಖೆಯಿಂದ 5ಕೋಟಿ ರೂ.ಗಳಿಂದ 1 ಕೋಟಿ ರೂ.ಗಳ ವರೆಗೂ ಆರ್ಥಿಕ ನೆರವು ನೀಡಲಾಗುವುದು. ಆಲಮಟ್ಟಿ ಜಲಾಶಯದ ಬಳಿ ಮೀನುಮರಿ ತೊಟ್ಟಿಗಳ ನಿರ್ಮಾಣಕ್ಕೆ 25 ಎಕರೆ ಗುರುತಿಸಲಾಗಿದೆ. ಆಳ ಸಮುದ್ರದ ಮೀನುಗಾರಿಕೆಗೂ ಅವಕಾಶ ನೀಡಲಾಗುತ್ತಿದೆ’ ಎಂದು ಅಂಗಾರ ವಿವರ ನೀಡಿದರು.

Similar News