ಚಿಕ್ಕಬಳ್ಳಾಪುರ | ದಲಿತರ ಮದುವೆಗೆ ಕಲ್ಯಾಣ ಮಂಟಪ ನಿರಾಕರಿಸಿದ ಆರೋಪ; ತಹಶೀಲ್ದಾರ್‌ಗೆ ದೂರು

ಮುಜರಾಯಿ ಇಲಾಖೆಗೆ ಸೇರಿದ ದೇಗುಲ ಸಮಿತಿಗೆ ನೋಟಿಸ್

Update: 2022-11-05 06:51 GMT

ಚಿಕ್ಕಬಳ್ಳಾಪುರ: ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣದ ಸಂತೆ ಮೈದಾನದ ಬಳಿಯಿರುವ ಶ್ರೀ ಲಕ್ಷ್ಮೀ ವೆಂಕರಮಣ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪವನ್ನು ಪರಿಶಿಷ್ಟ ಜಾತಿ ಸಮುದಾಯದವರ ಮದುವೆಗೆ ನೀಡಲು ನಿರಾಕರಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. 

ಈ ಸಂಬಂಧ ತಹಶೀಲ್ದಾರರಿಗೆ ದೂರು ನೀಡಿರುವ ದಲಿತಪರ ಸಂಘಟನೆಗಳು, ದೇಗುಲ ಸಮಿತಿಯ ವ್ಯವಸ್ಥಾಪಕರ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ. 

ಘಟನೆ ವಿವರ: ತಾಲೂಕಿನ ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ವೆಂಕಟರಾಯಪ್ಪ ಅವರ ಪುತ್ರಿ ವೆಂಕಟಲಕ್ಷ್ಮಿ ಮತ್ತು ಬಾಗೇಪಲ್ಲಿಯ ಮಹೇಶ್ ಎಂಬುವರ ವಿವಾಹ ನ. 3ರಂದು ನಿಶ್ಚಯವಾಗಿತ್ತು. ವಿವಾಹಕ್ಕೂ 15 ದಿನ ಮುಂಚೆಯೇ ವಧುವಿನ ಸಹೋದರ ಆವುಲಕೊಂಡಪ್ಪ ದೇವಾಲಯ ಸಮಿತಿಯ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಅವರ ಬಳಿ ಬಂದು, ‘ನನ್ನ ತಂಗಿಯ ವಿವಾಹವಿದ್ದು ದೇಗುಲದ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಿ’ ಎಂದು ಕೋರಿದ್ದರು. ನವೆಂಬರ್ 3ರಂದು ಬೇರೊಂದು ವಿವಾಹಕ್ಕೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಲಾಗಿದೆ ಎಂದು ವೆಂಕಟರಾಯಪ್ಪ ತಿಳಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಯಾವುದೇ ಮದುವೆಗಳು ಆ ದಿನಾಂಕದಂದು ನಿಗದಿಯಾಗಿರಲಿಲ್ಲ ಎಂದು ತಿಳಿದಿದೆ.

3ರಂದು ವಧು, ವರ ಹಾಗೂ ಅವರ ಸಂಬಂಧಿಕರು ‌ದೇವಾಲಯದ ಮುಂಭಾಗ ಮದುವೆ ಮಾಡಿಕೊಳ್ಳಲು ಬಂದಿದ್ದರು. ಆಗ ದೇವಾಲಯ ಮತ್ತು ಕಲ್ಯಾಣ ಮಂಟಪಕ್ಕೆ ಬೀಗ ಹಾಕಲಾಗಿತ್ತು. ಅಲ್ಲಿ ಯಾವುದೇ ಮದುವೆ ಸಮಾರಂಭ ನಡೆಯುತ್ತಿರಲಿಲ್ಲ. ವಧು–ವರ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಹಿನ್ನೆಲೆಯಲ್ಲಿಯೇ ವೆಂಕಟರಾಯಪ್ಪ ಕಲ್ಯಾಣ ಮಂಟಪ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದರೂ ಕಲ್ಯಾಣ ಮಂಟಪವನ್ನು ನೀಡಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೋಟಿಸ್ ಜಾರಿ: ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ನ ವ್ಯವಸ್ಥಾಪಕ ವೆಂಕಟರಾಯಪ್ಪ ಎಂಬುವವರಿಗೆ   ತಹಶೀಲ್ದಾರ್ ಅವರ ಕಚೇರಿಯಿಂದ ಕಾರಣಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಾಲಯದ ಆಡಳಿತ ಮಂಡಳಿ ಹಸ್ತಕ್ಷೇಪ ಇರುವುದು ಕಂಡುಬಂದೆ. ಈ ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ಈ ಕುರಿತು ಲಿಖಿತ ರೂಪದಲ್ಲಿ ಸಮಜಾಯಿಷಿ ನೀಡಬೇಕು ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ.

--------------------------------------

''ನನ್ನ ಗಮನಕ್ಕೆ ಬಂದ ಕೊಡಲೇ ದೇವಾಸ್ಥಾನದ ಟ್ರಸ್ಟ್ ನ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದೇನೆ .ಅದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದೆ . ಆದ್ದರಿಂದ ಅಲ್ಲಿ ಈ ರೀತಿ ದಲಿತರಿಗೆ ಮದುವೆಗೆ ಕಲ್ಯಾಣ ಮಂಟಪ ನೀಡದೇ ಇರುವುದು ಅರ್ಜಿ ಬಂದಿದೇ ಕೂಡಲೇ ಪರಿಶೀಲಿಸಿ,  ಕ್ರಮ ವಹಿಸಿ ಸರಕಾರದ ವಶಕ್ಕೆ ದೇವಾಲಯವನ್ನು ತೆಗೆದುಕೊಳ್ಳುತ್ತೇನೆ ತಪ್ಪಿಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು'' 

ಸಿಗ್ಬತ್ ವುಲ್ಲಾ,  ತಹಶೀಲ್ದಾರ್ ಗುಡಿಬಂಡೆ

Similar News