ಈಡಿ ಅಧಿಕಾರಿಗಳು ಯಾಕೆ ಪದೇ ಪದೇ ನೋಟಿಸ್ ನೀಡಿ ಹಿಂಸೆ ನೀಡುತ್ತಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು, ನ. 5: ‘ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ನನಗೆ ಪದೇ ಪದೇ ಯಾಕೆ ನೊಟೀಸ್ ನೀಡಿ ಹಿಂಸೆ ನೀಡುತ್ತಿದ್ದಾರೋ ಗೊತ್ತಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈಡಿ ಸಮನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಡಿ ಅವರಿಗೆ ನಾನು ಎಲ್ಲ ಉತ್ತರ ನೀಡಿದ್ದೆ. ಆದರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆಂದು ನ.7ಕ್ಕೆ ವಿಚಾರಣೆಗೆ ಹಾಜರಾಗುವಂತೆ ನನಗೆ ಹಾಗೂ ನನ್ನ ಸಹೋದರ ಡಿ.ಕೆ.ಸುರೇಶ್ ಅವರಿಗೆ ನೊಟೀಸ್ ನೀಡಿದ್ದಾರೆ. ಅವರು ಕೆಲವು ದಾಖಲೆ ಕೇಳಿದ್ದು ಅವುಗಳನ್ನು ಸಲ್ಲಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ಇನ್ನು ಕೆಲವು ದಾಖಲೆ ಕಳುಹಿಸಬೇಕು. ಮುಂದಿನ ದಿನಗಳಲ್ಲಿ ಕಳುಹಿಸುತ್ತೇನೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ಪ್ರಕರಣ ದಾಖಲಿಸಿದ್ದು, ಈ ರೀತಿ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‍ಗೆ ಅರ್ಜಿ ಹಾಕಿದ್ದೇನೆ. ಕಾನೂನು ಮೇಲೆ ಗೌರವ ಇದೆ. ಅವರು ಏನು ಹೇಳುತ್ತಾರೋ ನೋಡೋಣ’ ಎಂದು ಶಿವಕುಮಾರ್ ತಿಳಿಸಿದರು.
‘ತುಮಕೂರು ಆಸ್ಪತ್ರೆ ಅಧಿಕಾರಿಗಳಿಂದಾಗಿ ಗರ್ಭಿಣಿ ಹಾಗೂ ಅವಳಿ ಮಕ್ಕಳ ಸಾವು ಘಟನೆ ಸರಕಾರದ ವೈಫಲ್ಯ. ಈ ಸರಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವಿಲ್ಲ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಅದಕ್ಕೆ ಇದೇ ಸಾಕ್ಷಿ. ಸರಕಾರಕ್ಕೆ ಜನರ ನೋವು, ಭಾವನೆ ಗೊತ್ತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವುದು ತಿಳಿದಿಲ್ಲ. ಸರಕಾರ ಈಗ ಅಧಿಕಾರಿಗಳ ಅಮಾನತು ಮಾಡುವುದಾದರೆ, ಆಕ್ಸಿಜನ್ ದುರಂತ ಸಂದರ್ಭದಲ್ಲಿ 36 ಜನ ಸತ್ತಾಗ ಯಾಕೆ ಅಮಾನತು ಮಾಡಲಿಲ್ಲ’ ಎಂದು ಅವರು ಪ್ರಶ್ನಿಸಿದರು.
‘ಆಗ ಯಾವುದೇ ಅಧಿಕಾರಿ ವಿರುದ್ಧ ಕ್ರಮವೂ ಇಲ್ಲ, ಸಚಿವರ ರಾಜೀನಾಮೆ ಇಲ್ಲ. ನಾನು ಸಂತ್ರಸ್ತ ಕುಟುಂಬಗಳಿಗೆ ಹೋಗಿ ತಲಾ 1 ಲಕ್ಷ ರೂ.ಚೆಕ್ ನೀಡಿ ಸಾಂತ್ವನ ಹೇಳಿದೆ. ಕೋವಿಡ್‍ನಿಂದ ಸತ್ತವರಿಗೂ ಸರಕಾರ ಈವರೆಗೂ ಪರಿಹಾರ ಹಣ ನೀಡಿಲ್ಲ. ರಾಜ್ಯದ ಎಲ್ಲ ಭಾಗಗಳಿಂದ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸಿ ನಂತರ ಈ ಬಗ್ಗೆ ಮಾತನಾಡುತ್ತೇನೆ. ಇದು ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಇಡೀ ಸರಕಾರದ ವೈಫಲ್ಯ' ಎಂದು ಅವರು ದೂರಿದರು.
‘ದೇಶದೆಲ್ಲೆಡೆ ಜನ ಸಿನಿಮಾ ಹಾಡುಗಳನ್ನು ತಮ್ಮ ವಿಡಿಯೋಗಳಿಗೆ ಬಳಸುತ್ತಾರೆ. ಅದರಲ್ಲಿ ಯಾವ ಅಪರಾಧ ಇದೆಯೋ ಎಂದು ತಿಳಿಯುತ್ತಿಲ್ಲ. ಇಂತಹ ಪ್ರಕರಣಗಳ ಅನೇಕ ಉದಾಹರಣೆ ಪಟ್ಟಿ ನೀಡಬಹುದು. ಇದನ್ನು ನಾವು ಕಾನೂನಿನ ಮೂಲಕ ಎದುರಿಸುತ್ತೇವೆ' ಎಂದು ಶಿವಕುಮಾರ್, ಭಾರತ್ ಜೋಡೋ ಯಾತ್ರೆಗೆ ಸಿನಿಮಾ ಹಾಡಿನ ಬಳಕೆ ಬಗ್ಗೆ ಪ್ರತಿಕ್ರಿಯಿಸಿದರು.