ತಾಯಿ, ಅವಳಿ ಶಿಶುಗಳ ಸಾವಿನ ಪ್ರಕರಣದಲ್ಲಿ ವಿನಾಕಾರಣ ನನ್ನನ್ನು ಸಿಲುಕಿಸಲಾಗಿದೆ: ಅಮಾನತುಗೊಂಡಿರುವ ವೈದ್ಯೆ ಆರೋಪ

Update: 2022-11-05 15:51 GMT

ತುಮಕೂರು. ನ.05: ''ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲದಿದ್ದರೂ ವಿನಾಕಾರಣ ನನ್ನನ್ನು ಸಿಲುಕಿಸಿ, ಅಮಾನತ್ತು ಪಡಿಸಲಾಗಿದೆ' ಎಂದು ಅಮಾನತುಗೊಂಡಿರುವ ಹೆರಿಗೆ ಮತ್ತು ಸ್ರೀ ರೋಗ ತಜ್ಞೆ ಡಾ. ಉಷಾ ಆರೋಪಿಸಿದ್ದಾರೆ. 

ಈ ಸಂಬಂಧ ಸರಕಾರಿ ವೈಧ್ಯಾಧಿಕಾರಿಗಳ ಸಂಘಕ್ಕೆ ಪತ್ರ ಬರೆದಿರುವ ಡಾ.ಉಷಾ, ''ನವೆಂಬರ್ ಎರಡರಂದು ಬೆಳಗ್ಗೆ 9:30 ರಿಂದ ಸಂಜೆ 5:30 ರವರೆಗೆ ಒಪಿಡಿ ಮತ್ತು ಐಪಿಡಿ ಯಲ್ಲಿ ಕಾರ್ಯನಿರ್ವಹಿಸಿ, 5:30 ರಿಂದ ರಾತ್ರಿ 9 ಗಂಟೆಯ ವರೆಗೆ ಶಸ್ತ್ರಚಿಕಿತ್ಸಾ ಕೊಠಡಿಗೆ ತೆರಳಿ 8 ಅಪರೇಷನ್ ನಡೆಸಿದ್ದೇನೆ. ಒಪಿಡಿ ಮುಗಿಸಿ ಜನರಲ್ ವಾರ್ಡಿನಲ್ಲಿರುವ ಗರ್ಭಿಣಿ ಮಹಿಳೆಯರ ನೋಡಲು ಹೋಗುವ ಸಂದರ್ಭದಲ್ಲಿ ಮೃತ ಮಹಿಳೆ ತಪಾಸಣೆಗೆ ಒಳಗಾಗಲು ಹಿಂದೇಟು ಹಾಕುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗುವಂತೆ ಬುದ್ದಿವಾದ ಹೇಳಿ, ಗರ್ಭಿಣಿ ಸ್ತ್ರಿಯರ ನೋಡಲು ಹೋಗಿದ್ದೇನೆ.ಇದೆಲ್ಲಾ ಅಂದಿನ ವಿಡಿಯೋ ದೃಶ್ಯಾವಳಿಗಳಲ್ಲಿ ದಾಖಲಾಗಿದ್ದು, ಈ ಎಲ್ಲಾ ದಾಖಲೆಗಳ ಸಮೇತ ನೊಟೀಸ್ ಗೆ ಉತ್ತರ ನೀಡಿದ್ದರೂ ನನ್ನನು ಸೇವೆಯಿಂದ ಅಮಾನತ್ತು ಮಾಡಲಾಗಿದೆ‌'' ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಈ ವಿಚಾರವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಡಾ.ಉಷಾ, ''ಪ್ರಕರಣದಲ್ಲಿ ನನ್ನ ಪಾತ್ರವಿಲ್ಲದಿಧ್ದರೂ ಅಮಾನತ್ತು ಮಾಡಿರುವುದು ನೋವು ತಂದಿದೆ. ಸಚಿವರನ್ನು ಕೇಳಿದರೆ ರಾಜಕೀಯ ಒತ್ತಡವಿತ್ತು. ಅದಕ್ಕಾಗಿ ಅಮಾನತ್ತು ಮಾಡಿದ್ದೇವೆ ಎಂಬ ಉತ್ತರ ನೀಡುತ್ತಾರೆ. ಇದರಿಂದ ನನ್ನ ಮಾನಸಿಕ ಸ್ಥೈರ್ಯ ಕುಗ್ಗಿ ಹೋಗಿದೆ'' ಎಂದು ತಿಳಿಸಿದರು. 

Similar News