ಅಡ್ಡಂಡ ಕಾರ್ಯಪ್ಪ ನಿರ್ದೇಶನದಲ್ಲಿ ‘ಟಿಪ್ಪು ನಿಜ ಕನಸುಗಳು’: ರಂಗಾಯಣದ ದುರುಪಯೋಗದ ಆರೋಪ
ಮೈಸೂರು, ನ.5: ‘ಟಿಪ್ಪುನಿಜ ಕನಸುಗಳು’ ಪುಸ್ತಕ ನ.13ರಂದು ಬಿಡುಗಡೆಯಾಗಲಿದ್ದು, ನ.20ರಂದು ಈ ಪುಸ್ತಕ ನಾಟಕ ರೂಪ ಪಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಈ ಕುರಿತು ರಂಗಾಯಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಟಕದಲ್ಲಿ 30 ಕಲಾವಿದರ ತಂಡ 100 ಕ್ಕೂ ಹೆಚ್ಚು ಪ್ರದರ್ಶನ ನೀಡುವ ಉದ್ದೇಶ ಹೊಂದಿದ್ದು, ಈ ಮೂಲಕ ಜನರಿಗೆ ಟಿಪ್ಪುವಿನ ಬಗ್ಗೆ ಸತ್ಯ ವಿಚಾರಗಳನ್ನು ತಿಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.
‘ಟಿಪ್ಪು ನಿಜ ಕನಸುಗಳು’ ಪುಸ್ತಕ, ಟಿಪ್ಪುವಿನ ನೈಜ ಸಂಗತಿಗಳನ್ನು ಬಯಲಿಗೆಳೆಯುವ ಪ್ರಯತ್ನವಾಗಿದ್ದು, ಇತಿಹಾಸದಲ್ಲಿ ಟಿಪ್ಪುವಿನ ಬಗ್ಗೆ ನೈಜ ಘಟನೆಗಳನ್ನು ಮುಚ್ಚಿ ಹಾಕಲಾಗಿದೆ. ಆದ್ದರಿಂದ ಈ ಬಗ್ಗೆ ಜನರಿಗೆ ನೈಜ ಸಂಗತಿಗಳನ್ನು ತಿಳಿಸಲು ನಾನೇ ಸಾಕ್ಷಿಗಳನ್ನು ಸಂಗ್ರಹಿಸಿ ಪುಸ್ತಕ ಬರೆದಿದ್ದೇನೆ ಎಂದು ತಿಳಿಸಿದರು.
''ರಂಗಾಯಣದ ದುರುಪಯೋಗ'': ಆರೋಪ
ಟಿಪ್ಪು ಸುಲ್ತಾನ್ ಬಗ್ಗೆ ಈಗಾಗಲೇ ಸಾರ್ವಜನಿಕ ವೇದಿಕೆಗಳಲ್ಲಿ ಆಕ್ಷೇಪಾರ್ಹ ಮಾತುಗಳನ್ನಾಡಿ ವಿವಾದಕ್ಕೀಡಾಗಿರುವ ಅಡ್ಡಂಡ ಕಾರ್ಯಪ್ಪ, ಮತ್ತೆ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ರಂಗಾಯಣವನ್ನು ರಾಜಕೀಯ ಕಾರಣಗಳಿಗೆ ದುರುಪಯೋಗ ಪಡಿಸುತ್ತಿದ್ದಾರೆ ಎಂದು ರಂಗ ಕಲಾವಿದರು ಆರೋಪಿಸುತ್ತಿದ್ದಾರೆ.
ಟಿಪ್ಪುವಿಚಾರದ ಬಗ್ಗೆ ಸರಕಾರಿ ಸಂಸ್ಥೆ ರಂಗಾಯಣದಲ್ಲಿ ಏಕೆ ನಾಟಕ ಪ್ರದರ್ಶನ ಮಾಡುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ, ಯಾಕೆ ಮಾಡಬಾರದು. ಹಾಗೇನಾದರೂ ನಿಯಮ ಇದೆಯಾ ಎಂದು ಸುದ್ದಿಗೋಷ್ಠಿ ವೇಳೆ ಅಡ್ಡಂಡ ಸಿ.ಕಾರ್ಯಪ್ಪ ಮರು ಪ್ರಶ್ನೆ ಹಾಕಿದರು.