ಚಿಕ್ಕಮಗಳೂರು: ಪ್ರವೇಶ ಚೀಟಿಯಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬದಲಾವಣೆ

ಟಿಇಟಿ ಪರೀಕ್ಷೆ ಬರೆಯದೇ ಹಿಂದಿರುಗಿದ ಹೊರ ಜಿಲ್ಲೆಗಳ ಅಭ್ಯರ್ಥಿಗಳು

Update: 2022-11-06 15:10 GMT

ಚಿಕ್ಕಮಗಳೂರು: ಆನ್‍ಲೈನ್‍ನಲ್ಲಾದ ಎಡವಟ್ಟಿನಿಂದಾಗಿ ರವಿವಾರ ನಗರದ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಟಿಇಟಿ ಪರೀಕ್ಷೆಗೆ ಪ್ರವೇಶ ಸಿಗದೇ ಅಭ್ಯರ್ಥಿಗಳು ತೊಂದರೆಗೀಡಾದ ಘಟನೆ ನಡೆದಿದೆ.

ಶಿಕ್ಷಕರ ನೇಮಕಾತಿ ಹಿನ್ನೆಲೆಯಲ್ಲಿ ರವಿವಾರ ರಾಜ್ಯಾದ್ಯಂತ ಟಿಇಟಿ ಪರೀಕ್ಷೆ ನಡೆದಿದ್ದು, ಆನ್‍ಲೈನ್ ಎಡವಟ್ಟಿನಿಂದಾಗಿ ಚಿಕ್ಕಮಗಳೂರು ನಗರದ ಹಲವು ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಸಿಗದೇ ಹೊರ ಜಿಲ್ಲೆಗಳ ಅಭ್ಯರ್ಥಿಗಳು ಪರೀಕ್ಷೆ ಬರೆಯದೇ ಹಿಂದಿರುಗುವಂತಾಯಿತು. ಟಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಹುಬ್ಬಳ್ಳಿ ಮೂಲದ ಕೆಲ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಪಡೆದುಕೊಂಡಿದ್ದ ಪ್ರವೇಶ ಚೀಟಿಯಲ್ಲಿ ಒಮ್ಮೆ ಒಂದು ಪರೀಕ್ಷಾ ಕೇಂದ್ರದ ಹೆಸರು ನಮೂದಿಸಲಾಗಿದ್ದು, ಅದರಂತೆ ಅಭ್ಯರ್ಥಿಗಳು ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ತೆರಳಿದಾಗ ಆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯ ನೋಂದಣಿ ಸಂಖ್ಯೆ ಇಲ್ಲದ ಕಾರಣಕ್ಕೆ ಸಿಬ್ಬಂದಿ ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಿದ್ದಾರೆ. 

ನಂತರ ಮತ್ತೆ ಆನ್‍ಲೈನ್ ಪ್ರವೇಶ ಚೀಟಿ ಡೌನ್‍ಲೋಡ್ ಮಾಡಿದಾಗ ಅದರಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರದ ಹೆಸರಿರುವುದು ಕಂಡು ಬಂದಿದೆ. ಇದರಿಂದ ಪರೀಕ್ಷಾ ಕೇಂದ್ರದ ಸ್ಥಳ, ವಿಳಾಸ ಗೊತ್ತಾಗದೇ ಅಭ್ಯರ್ಥಿಗಳು ಪರದಾಡಿದ್ದಾರೆ. ಅಲ್ಲದೇ ರವಿವಾರ ನಗರದಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳ ಬಂದ್ ಆಗಿದ್ದರಿಂದ ಅಭ್ಯರ್ಥಿಗಳು ಹೊಸದಾಗಿ ಪ್ರವೇಶ ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲಾಗದೇ ಸಮಸ್ಯೆ ಎದುರಿಸಿದ್ದಾರೆ. 

ನಗರದ ಬಸವನಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದ ಮುಂದೆ ರವಿವಾರ ಬೆಳಗ್ಗೆ ಟಿಇಟಿ ಪರೀಕ್ಷೆ ಬರೆಯಲು ಹುಬ್ಬಳ್ಳಿಯಿಂದ ಬಂದಿದ್ದ ಹಲವು ಅಭ್ಯರ್ಥಿಗಳು ಪ್ರವೇಶ ಚೀಟಿಯಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬದಲಾಗಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಸಿಗದೇ ಸಂಬಂಧಿಸಿದ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು ಕಂಡು ಬಂದಿದ್ದು, ಆನ್‍ಲೈನ್ ಪ್ರವೇಶ ಚೀಟಿಯಲ್ಲಿನ ಎಡವಟ್ಟಿನಿಂದಾಗಿ ಶಿಕ್ಷಕರಾಗಲು ಬಯಸಿದ್ದ ಹಲವು ಅಭ್ಯರ್ಥಿಗಳು ಪರೀಕ್ಷೆ ಬರೆಯಲಾಗದೇ ಹಿಂದಿರುಗುತ್ತಿದ್ದ ದೃಶ್ಯಗಳು ನಗರದ ಹಲವು ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಕಂಡು ಬಂದವು.

ನಾನು ಟಿಇಟಿ ಪರೀಕ್ಷೆ ಬರೆಯಲು ಹುಬ್ಬಳ್ಳಿಯಿಂದ ನಿನ್ನೆ ರಾತ್ರಿಯೇ ನಗರಕ್ಕೆ ಆಗಮಿಸಿದ್ದೆ. ಮೊದಲು ಆನ್‍ಲೈನ್‍ನಲ್ಲಿ ಪಡೆದ ಪ್ರವೇಶ ಚೀಟಿಯಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬೇರೆ ಇತ್ತು. ರವಿವಾರ ಡೌನ್‍ಲೋಡ್ ಮಾಡಿದ ಪ್ರವೇಶ ಚೀಟಿಯಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬಸವನಹಳ್ಳಿ ಕಾಲೇಜು ಎಂದು ನಮೂದಾಗಿದೆ. ಆದರೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಹಿಂದಕ್ಕೆ ಕಳುಹಿಸಿದ್ದಾರೆ. ನನ್ನಂತೆ ಹಲವಾರು ಅಭ್ಯರ್ಥಿಗಳಿಗೆ ಇದೇ ಸಮಸ್ಯೆ ಎದುರಾಗಿದೆ. ಹೊರ ಜಿಲ್ಲೆಗಳಿಂದ ಬಂದಿರುವ ನಾವು ಪರೀಕ್ಷಾ ಕೇಂದ್ರದ ವಿಳಾಸ ತಿಳಿಯದೇ, ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಲೂ ಸಾಧ್ಯವಾಗದೇ ಪರೀಕ್ಷೆಯನ್ನೂ ಬರೆಯಲು ಸಾಧ್ಯವಾಗಿಲ್ಲ. ಆನ್‍ಲೈನ್ ಎಡವಟ್ಟಿನಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳೇ ಇದಕ್ಕೆ ಹೊಣೆ.
- ಅವಿನಾಶ್, ಟಿಇಟಿ ಪರೀಕ್ಷೆ ಬರೆಯಲು ಹುಬ್ಬಳ್ಳಿಯಿಂದ ಬಂದಿದ್ದ ಅಭ್ಯರ್ಥಿ

Similar News