ಜಗ ದಗಲ

Update: 2022-11-08 04:57 GMT

ಅಳಿದುಹೋಗುವ ಅಪಾಯದಲ್ಲಿ ಎಂಪರರ್ ಪೆಂಗ್ವಿನ್

ಹವಾಮಾನ ಬದಲಾವಣೆಯ ಹೊಡೆತಕ್ಕೆ ಸಿಲುಕಿ ಅಪಾಯದಲ್ಲಿರುವ ಜೀವಿಗಳಲ್ಲಿ ಅಂಟಾರ್ಕ್ಟಿಕಾದ ಎಂಪರರ್ ಪೆಂಗ್ವಿನ್‌ಗಳೂ ಸೇರುತ್ತವೆ. ಜಾಗತಿಕ ತಾಪಮಾನದಲ್ಲಿನ ಏರಿಕೆ ಮತ್ತು ಸಮುದ್ರದಲ್ಲಿನ ಹಿಮ ಇಲ್ಲವಾಗುತ್ತಿರುವುದರಿಂದ ಈ ಪೆಂಗ್ವಿನ್‌ಗಳ ಸಂತತಿ ಅಳಿವಿನಂಚಿನಲ್ಲಿದೆ. ಈ ವಿಚಾರವನ್ನು ಪ್ರಕಟಿಸಿರುವ ಅಮೆರಿಕ ವನ್ಯಜೀವಿ ಪ್ರಾಧಿಕಾರ, ಅವುಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನ ಕ್ರಮದ ಅಗತ್ಯವನ್ನು ಒತ್ತಿಹೇಳಿದೆ. ಅಳಿವಿನಂಚಿನಲ್ಲಿರುವ ಜೀವಿಗಳ ಕಾಯ್ದೆ(ಇಎಸ್‌ಎ) ಅಡಿಯಲ್ಲಿ ಈ ಹಾರಲಾರದ ಕಡಲ ಹಕ್ಕಿಗಳಿಗೆ ಹೊಸ ಬಗೆಯ ರಕ್ಷಣೆ ಸಿಗಲಿದೆ. 1973ರ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಯ್ದೆಯು ಗ್ರಿಜ್ಲಿ ಕರಡಿಗಳು, ಬೋಳು ಹದ್ದುಗಳು, ಬೂದು ತಿಮಿಂಗಿಲಗಳನ್ನು ಒಳಗೊಂಡಂತೆ ಹಲವಾರು ಜೀವಿಗಳನ್ನು ಅಳಿವಿನ ಅಂಚಿನಿಂದ ಮರಳಿ ತಂದ ಕೀರ್ತಿಗೆ ಪಾತ್ರವಾಗಿದೆ. ಈ ಕಠಿಣ ಕಾನೂನು ಗಣಿಗಾರಿಕೆಯಂಥ ಕೆಲವು ಉದ್ಯಮಗಳ ವಿಚಾರದಲ್ಲಿ ನಿರ್ದಾಕ್ಷಿಣ್ಯ ನಡೆ ಅನುಸರಿಸುತ್ತದೆ. ಜೀವಜಾತಿಗಳ ಉಳಿವಿಗಾಗಿ ಅಗತ್ಯವೆಂದು ಪರಿಗಣಿಸಲಾದ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದನ್ನು ನಿಲ್ಲಿಸುವುದೂ ಅದು ತೆಗೆದುಕೊಳ್ಳುವ ಕ್ರಮಗಳಲ್ಲಿ ಸೇರುತ್ತದೆ. ಅಪಾಯ ಎದುರಿಸುವ ಜೀವಪ್ರಭೇದಗಳ ಪಟ್ಟಿಯು, ಬೆಳೆಯುತ್ತಿರುವ ಅಳಿವಿನ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತದೆ ಮತ್ತು ಇಎಸ್‌ಎಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತದ ಜೀವಿಗಳ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತಿದೆ ಮತ್ತು ಅದನ್ನು ಪರಿಹರಿಸುವುದು ಸರಕಾರಗಳ ಆದ್ಯತೆಯಾಗಬೇಕಿದೆ. ಎಂಪರರ್ ಪೆಂಗ್ವಿನ್ ಕೂಡ ಈಗ ಅಳಿವಿನಂಚಿನಲ್ಲಿರುವ ಜೀವಗಳ ಪಟ್ಟಿ ಸೇರಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಆದರೂ ತುರ್ತು ಕ್ರಮಗಳನ್ನು ಕೈಗೊಳ್ಳುವ ಎಲ್ಲ ಅವಕಾಶವೂ ಇದ್ದು, ಅವುಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನು ನಿರೀಕ್ಷಿಸಬಹುದು ಎನ್ನುತ್ತಿದ್ದಾರೆ ಪರಿಣತರು. ***

ದಕ್ಷಿಣಧ್ರುವದಲ್ಲಿ ಹಗಲು

ಆರು ತಿಂಗಳ ಕತ್ತಲೆಯ ಬಳಿಕ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಿದೆ. ಭೂಮಿಯ ಏಳು ಖಂಡಗಳಲ್ಲಿ ಒಂದಾಗಿರುವ ಅಂಟಾರ್ಕ್ಟಿಕಾ ದಕ್ಷಿಣ ಧ್ರುವದ ತವರಾಗಿದ್ದು, ಅಲ್ಲಿ ಫೆಬ್ರವರಿಯವರೆಗೆ ಈ ಬೇಸಿಗೆ ಅವಧಿಯಿರುತ್ತದೆ.

ಇದು ಭೂಮಿಯ ಮೇಲಿನ ದಕ್ಷಿಣದ ಅತ್ಯಂತ ದೂರದ ಬಿಂದು. ಭೂಮಿಯ ಅಕ್ಷ ಮತ್ತು ಮೇಲ್ಮೈ ಸಂಧಿಸುವ ನಿಖರವಾದ ತಾಣ. ಈ ಸ್ಥಳವು ಅದರ ಸೂರ್ಯೋದಕ್ಕೆ ಹೆಸರುವಾಸಿ. ಆರು ತಿಂಗಳ ದೀರ್ಘ ಚಳಿಗಾಲವು ಖಂಡದ ಒಳಭಾಗದಲ್ಲಿ ಅಷ್ಟೇ ದೀರ್ಘ ರಾತ್ರಿಯಾಗಿರುತ್ತದೆ.

ಅಂಟಾರ್ಕ್ಟಿಕಾದಲ್ಲಿ ಕಾಣುವುದು ಎರಡೇ ಋತುಗಳು. ಒಂದು ಬೇಸಿಗೆ, ಇನ್ನೊಂದು ಚಳಿಗಾಲ. ದಟ್ಟ ಹಿಮಾವೃತ ವಲಯವಾಗಿರುವ ಇಲ್ಲಿ ಆರು ತಿಂಗಳ ಚಳಿಗಾಲದ ಬಳಿಕ ಬರುವ ಬೇಸಿಗೆಯು ಪೂರ್ತಿ ಹಗಲಿನಿಂದ ಕೂಡಿರುತ್ತದೆ. ***

ವಿಶ್ವದ ಅತಿ ಎತ್ತರದ ಮಹಿಳೆಯ ಮೊದಲ ವಿಮಾನಯಾನ

ರುಮೇಯ್ಸ ಗೆಲ್ಗಿ. ಅತ್ಯಂತ ಎತ್ತರದ ಮಹಿಳೆ ಎಂದು ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ 25 ವರ್ಷದ ಗೆಲ್ಗಿ ಜೀವಮಾನದಲ್ಲೇ ಮೊದಲ ಬಾರಿಗೆ ವಿಮಾನಯಾನ ಮಾಡಿದ್ದಾರೆ. ಗೆಲ್ಗಿಯ ಪ್ರಯಾಣಕ್ಕೆ ಅನುಕೂಲವಾಗಲು ಟರ್ಕಿಶ್ ಏರ್‌ಲೈನ್ಸ್ ವಿಮಾನದ ಆರು ಸೀಟುಗಳನ್ನು ತೆಗೆದು, ಮಲಗುವ ಮಂಚದಂತೆ ವಿನ್ಯಾಸಗೊಳಿಸಿತ್ತೆಂಬುದು ವಿಶೇಷ. ಟರ್ಕಿಯ ಇಸ್ತಾಂಬುಲ್‌ನಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ 18 ಗಂಟೆಗಳ ಪ್ರಯಾಣ ಇದಾಗಿತ್ತು. ಗಿನ್ನೆಸ್ ದಾಖಲೆ ಪ್ರಕಾರ ಗೆಲ್ಗಿ 7.07 ಅಡಿ ಎತ್ತರವಿದ್ದಾರೆ. ಅಲ್ಲಿ ದಾಖಲಾಗಿರುವಂತೆ, ಅವರ ಈ ಎತ್ತರವು ಕೀಲುಗಳ ಸೀಮಿತ ಚಲನಶೀಲತೆ, ನಡೆಯುವಾಗ ಅಸ್ಥಿರತೆ, ಉಸಿರಾಟ ತೊಂದರೆ ಮೊದಲಾದವುಗಳಿಗೆ ಕಾರಣವಾಗಿದೆ. ಈಜುವುದೆಂದರೆ ಅವರಿಗೆ ಬಲು ಇಷ್ಟ. ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೆ ಅವರ ಆದ್ಯತೆ. ಮೊದಲ ಪ್ರಯಾಣದ ಬಗ್ಗೆ ಬರೆದುಕೊಂಡಿರುವ ಗೆಲ್ಗಿ, ಆರಂಭದಿಂದ ಕೊನೆಯವರೆಗೂ ಈ ಪ್ರಯಾಣ ಆರಾಮದಾಯಕವಾಗಿತ್ತು ಎಂದಿದ್ದಾರೆ. ಇದು ತಮ್ಮ ಮೊದಲ ಪ್ರಯಾಣವಾದರೂ, ಖಂಡಿತವಾಗಿ ಕೊನೆಯದಲ್ಲ ಎಂದೂ ಹೇಳಿಕೊಂಡಿದ್ದಾರೆ. ಆ ವಿಮಾನದಲ್ಲಿ ತನ್ನೊಂದಿಗೆ ಪ್ರಯಾಣಿಸಿದ ಎಲ್ಲರಿಗೂ ಆಕೆ ಧನ್ಯವಾದ ಹೇಳಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಗೆಲ್ಗಿ ಹೊಸ ಅವಕಾಶಗಳಿಗಾಗಿ ಮುಂದಿನ ಆರು ತಿಂಗಳು ಅಮೆರಿಕದಲ್ಲಿರಲಿದ್ದಾರೆ.