ಸಂಸದರ ನಿಧಿ ದುರ್ಬಳಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2022-11-08 14:59 GMT

ಮೈಸೂರು,ನ.8: ಸಂಸದರ ನಿಧಿಯ 41 ಲಕ್ಷ ರೂ. ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮಂಗಳವಾರ ಮೈಸೂರು ನಗರ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿದ ಅವರು,  ಜಿಲ್ಲಾಧಿಕಾರಿಗಳು ಇಲ್ಲದ ಕಾರಣ ಅಪರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, '' ಸಂಸದ ಪ್ರತಾಪ್ ಸಿಂಹ ತಮ್ಮ ಸಂಸದರ ನಿಧಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ  ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಂಜೆ ಹಾಗೂ  ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ತಮ್ಮ ಪತ್ನಿ ಹೆಸರಿನ ಹೊಯ್ಸಳ ಕ್ಲಿನಿಕ್‍ಗೆ ಸಂಸದರ ನಿಧಿಯಿಂದ ಆಂಬ್ಯುಲೆನ್ಸ್ ನೀಡಿದ್ದಾರೆ'' ಎಂದು ಆರೋಪಿಸಿದರು.

''ಮೈಸೂರಿನ ವಿಳಾಸವಿಲ್ಲದ ಗೋಪಿನಾಥ್ ಚಾರಿಟಬಲ್ ಟ್ರಸ್ಟ್ ಗೆ 23 ಲಕ್ಷದ ಆಂಬ್ಯುಲೆನ್ಸ್ ನೀಡಿದ್ದಾರೆ. ಆದರೆ ಇವರು ನೀಡಿರುವ ಚಾರಿಟಬಲ್ ಟ್ರಸ್ಟ್ ನ ವಿಳಾಸದಲ್ಲಿ ಮ್ಯಾಕ್ ಡೊನಾಲ್ಡ್ ಹೋಟೆಲ್ ಕಾಣಿಸುತ್ತದೆ. ಇದೊಂದು ಸುಳ್ಳು ದಾಖಲಾತಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಸಂಸದರ ನಿಧಿಯಿಂದ ಬೇರೆ ಜಿಲ್ಲೆಗೆ 18 ಲಕ್ಷ ಅನುದಾನ ಹಾಗೂ ವಿಳಾಸ ಇಲ್ಲದ ಮೈಸೂರಿನ ಚಾರಿಟಬಲ್  ಟ್ರಸ್ಟ್ ಗೆ 23 ಲಕ್ಷದ ಆಂಬ್ಯುಲೆನ್ಸ್ ನೀಡಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟು 41 ಲಕ್ಷ ರೂ. ಹಣವನ್ನು ತಮ್ಮಸಂಸದರ ನಿಧಿಯಿಂದ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೂಡಲೇ ಈ ಹಣವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೈಕೋರ್ಟ್‍ನಲ್ಲಿ ದಾವೆ ಹೂಡುವುದಾಗಿ ತಮ್ಮ ದೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ರಾಜೇಶ್, ಮಾಧ್ಯಮ ವಕ್ತಾರ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News