ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರ: ಸುತ್ತೋಲೆ

Update: 2022-11-08 16:58 GMT

ಬೆಂಗಳೂರು, ನ. 8: ರಾಜ್ಯ ಸರಕಾರವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38-ಎ ಮತ್ತು ನಿಯಮ 9-ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ(ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲನಿ ಇತ್ಯಾದಿ) ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸಿದೆ.

ಈ ಸಂಬಂಧ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಅನುಸರಿಸಬೇಕಾದ ಅಂಶಗಳ ಕುರಿತು ತಿಳಿಸಿದೆ.

ಖಾಸಗಿ ಜಮೀನಿನಲ್ಲಿ ಜನವಸತಿಗಳು ಇದ್ದಲ್ಲಿ. ಅಂತಹ ಸರ್ವೆ ನಂಬರ್ ಮತ್ತು ವಿಸ್ತೀರ್ಣವನ್ನು ಗುರುತಿಸಬೇಕು. ಈ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗ ಬಡಾವಣೆ, ಉಪ ಗ್ರಾಮ ಆಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಅವು ನೆಲೆಗೊಂಡಿರುವ ಜಾಗಗಳನ್ನು ಸರಕಾರದಲ್ಲಿ ನಿಹಿತಗೊಳಿಸಲು ಅಧಿಸೂಚನೆ ಹೊರಡಿಸಿಬೇಕು. ಸಾರ್ವಜನಿಕರ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿ, ಜಿಲ್ಲಾಧಿಕಾರಿಗಳ ಹೆಸರಿನಲ್ಲಿ, ಜಿಲ್ಲಾಧಿಕಾರಿಗಳು ಅವರ ಹಂತದಲ್ಲೆ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು.

ದಾಖಲೆ ರಹಿತ ಜನವಸತಿಯು ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂ ಮಾಲಕರೆ ಸ್ವತಃ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2-ಇ ಅಧಿಸೂಚನೆಯಲ್ಲಿ ತರಬಾರದು. ಗ್ರಾಮ ಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು.

2-ಇ ಅಧಿಸೂಚನೆ ಸಂಬಂಧ ಸಾರ್ವಜನಿಕರ ಸಲಹೆ/ಆಕ್ಷೇಪಣೆಗಳು ನಿಗದಿತ ಅವಧಿಯೊಳಗೆ ಸ್ವೀಕೃತಗೊಂಡಲ್ಲಿ, ಜಿಲ್ಲಾಧಿಕಾರಿಗಳು ಅಂತಹ ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ, ಸೂಕ್ತ ಲಿಖಿತ ಆದೇಶದೊಂದಿಗೆ ಆಕ್ಷೇಪಣೆಗಳನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.

ಜಿಲ್ಲಾಧಿಕಾರಿಗಳ ಆದೇಶದ ತರುವಾಯ ಪಹಣಿ ಪತ್ರಿಕೆಯಲ್ಲಿ 2-ಇ ಅಧಿಸೂಚನೆಯನ್ನು ಮುಟೇಷನ್ ಮುಖಾಂತರ ಖಾಸಗಿ ಜಮೀನನ್ನು ಸರಕಾರಕ್ಕೆ ನಿಹಿತಗೊಳಿಸಬೇಕು. ಕಲಂ 9 ರಲ್ಲಿ ಭೂಮಾಲಕರ ಹೆಸರನ್ನು ತೆಗೆದು ಸರಕಾರ ಎಂದು ನಮೂದಿಸಬೇಕು. 2-ಇ  ಅಧಿಸೂಚನೆಯಲ್ಲಿ ಹೊರಡಿಸಿರುವ ವಿಸ್ತೀರ್ಣಕ್ಕೆ ಮಾತ್ರವೇ ಪಹಣಿಯಲ್ಲಿ ಇಂಡೀಕರಿಸಬೇಕು.

ಕೃಷಿ ಕಾರ್ಮಿಕನು ಮಾಲಕತ್ವವನ್ನು ನೊಂದಾಯಿಸಿಕೊಳ್ಳುವುದಕ್ಕೆ ಅರ್ಜಿಯನ್ನು ಜಿಲ್ಲಾಧಿಕಾರಿ ನಮೂನೆ-2ಇ ಅಧಿಸೂಚನೆ ಹೊರಡಿಸಿದ 1 ವರ್ಷದ ಒಳಗೆ ಸಹಾಯಕ ಆಯುಕ್ತರು/ತಹಶೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಖಾಸಗಿ ಜಮೀನನ್ನು ಸರಕಾರಕ್ಕೆ ವಿಹಿತಗೊಳಿಸಿದ ತಕ್ಷಣವೇ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ಖಾಸಗಿ ಜಮೀನಿನಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಪ್ರಾರಂಭಿಸಬಹುದು. ಹೊಸ ಕಂದಾಯ ಗ್ರಾಮ ಘೋಷಣೆ ಮಾಡುವವರೆಗೆ ಕಾಯುವ ಅವಶ್ಯಕತೆ ಇರುವುದಿಲ್ಲ.

ಅರ್ಹ ವ್ಯಕ್ತಿಗೆ 4000 ಚ.ಮೀ. ಮೀರದಂತೆ ಅಥವಾ ವ್ಯಕ್ತಿಯ ನೈಜ ಸ್ವಾಧೀನದ ಭೂಮಿಯನ್ನು ಲಿಖಿತ ಆದೇಶದ ಮೂಲಕ ನಿರ್ಧರಿಸಬೇಕು. ತಹಶೀಲ್ದಾರ್, ಸಹಾಯಕ ಆಯುಕ್ತರಿಂದ ವಿಚಾರಣೆಯ ಆದೇಶವನ್ನು ಸ್ವೀಕರಿಸಿದ ನಂತರ ಅರ್ಜಿದಾರರಿಗೆ ನಿದಿಷ್ಟಪಡಿಸಿದ ಮೊತ್ತವನ್ನು ನಿರ್ಧರಿಸಬೇಕು.

ಅರ್ಜಿದಾರರಿಗೆ ಮಂಜೂರು ಮಾಡುತ್ತಿರುವ ಜಾಗದ ಜೊತೆಗೆ ಸಮುದಾಯದ ಜನರು ಬಳಸುತ್ತಿರುವ ರಸ್ತೆ, ಕಿರುದಾರಿ, ಪಥ, ಬೀದಿ, ಶಾಲೆ, ದೇವಾಲಯ, ಆರೋಗ್ಯ ಚಿಕಿತ್ಸಾಲಯ, ಕೊಳವೆ ಬಾವಿ, ತೆರೆದ ಬಾವಿ, ಮೈದಾನ, ತಿಪ್ಪೆಗಳ ವಿಸ್ತೀರ್ಣಕ್ಕೆ ವಾಸ ಸ್ಥಳದಲ್ಲಿ ವಾಸಿಸುವ ಕೃಷಿ ಕಾರ್ಮಿಕನು ಮಂಜೂರಾದ ಭೂಮಿಗೆ ಅನುಪಾತದಲ್ಲಿ ಮೊತ್ತವನ್ನು ಸರಕಾರಕ್ಕೆ ಪಾವತಿಸಬೇಕು.

Similar News