ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ-2023 | 17 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಿ: ಮನೋಜ್ ಕುಮಾರ್ ಮೀನಾ

27ಲಕ್ಷ ನಕಲಿ ಮತದಾರರ ಹೆಸರು ರದ್ದು ► ಜ.5ರಂದು ಮತದಾರರ ಅಂತಿಮ ಪಟ್ಟಿ ಪ್ರಕಟ

Update: 2022-11-09 14:06 GMT

ಬೆಂಗಳೂರು, ನ. 9: ಹದಿನೇಳು ವರ್ಷ ದಾಟಿದ ಯುವಕ-ಯುವತಿಯರು ಮತದಾರರಾಗಲು ಒಂದು ವರ್ಷ ಮುಂಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಬುಧವಾರ ನಗರದ ‘ವಾರ್ತಾ ಭವನ’ದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ-2023ರ ಕರಡು ಮತದಾರರ ಪಟ್ಟಿ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಈ ಹಿಂದೆ ಜನವರಿ 1ರೊಳಗೆ 18 ವರ್ಷಗಳನ್ನು ಪೂರ್ಣಗೊಳಿಸಿದವರು ಮಾತ್ರ ನೋಂದಾಯಿಸಿ ಕೊಳ್ಳಬಹುದಾಗಿತ್ತು. ಆದರೆ, ಈಗ 17 ವರ್ಷ ದಾಟಿದ ಯುವಕ-ಯುವತಿಯರು ಮತದಾರರಾಗಲು ಒಂದು ವರ್ಷ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅದರಂತೆ ಇಂದಿನಿಂದಲೇ ನಮೂನೆ 6ರ ಮೂಲಕ ಮುಂಗಡ ಅರ್ಜಿಗಳನ್ನು ಸಲ್ಲಿಸಿ’ ಎಂದು ಕೋರಿದರು.

ಬಿಎಲ್‍ಏ: ‘ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್ (ಬಿಎಲ್‍ಏ) ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಎಲ್ಲ್ಲ ಅರ್ಹ ಮತದಾರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಅವರು ಉಲ್ಲೇಖಿಸಿದರು.

ಅಲ್ಲದೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿನ ಕರಡು ಮತದಾರರ ಪಟ್ಟಿಗಳನ್ನು ಎಲ್ಲ ಮತಗಟ್ಟೆಗಳಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಇಂದಿನಿಂದ  ಪ್ರಕಟಿಸಲಾಗಿದೆ ಎಂದ ಅವರು, ಯಾವುದೇ ರೀತಿಯ ಆಕ್ಷೇಪಣೆಗಳು ಇದ್ದಲ್ಲಿ ಡಿ.8ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಂತಿಮ ಪಟ್ಟಿಯನ್ನು 2023ರ ಜ.5ರಂದು ಬಿಡುಗಡೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. 

ಎಷ್ಟು ಮತದಾರರು?: 2022ರ ಅಂತಿಮ ಮತದಾರರ ಪಟ್ಟಿಯಲ್ಲಿ 5.25 ಕೋಟಿ ಮತದಾರರಿದ್ದು, ಪೂರ್ವ ಪರಿಷ್ಕರಣಾ ಅವಧಿಯಲ್ಲಿ ಸತ್ತವರು, ಸ್ಥಳಾಂತರಗೊಂಡವರು, ಗೈರು ಹಾಜರಾದವರು ಇತ್ಯಾದಿ ಮತದಾರರನ್ನು ತೆಗೆದು ಹಾಕಿ 2023ರ ಕರಡು ಮತದಾರರ ಪಟ್ಟಿಯ ಪ್ರಕಾರ ಒಟ್ಟು 5.09 ಕೋಟಿ ಮತದಾರರಿದ್ದಾರೆ ಎಂದು ಹೇಳಿದರು.

ಇನ್ನೂ, ಇದರಲ್ಲಿ 5.08 ಕೋಟಿ ಸಾಮಾನ್ಯ ಮತದಾರರಿದ್ದು 47,817 ಸೇವಾ ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 2.56 ಕೋಟಿ ಪುರುಷ ಮತದಾರರು, 2.52 ಕೋಟಿ ಮಹಿಳಾ ಮತದಾರರು ಮತ್ತು 4,490 ಇತರೆ ಮತದಾರಿದ್ದಾರೆ ಎಂದು ವಿವರಿಸಿದರು.

ಅದರಲ್ಲೂ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತೀ ಹೆಚ್ಚು ಅಂದರೆ 6.41 ಲಕ್ಷ ಮತದಾರರಿದ್ದಾರೆ. ಹಾಗೇ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಕಡಿಮೆ 1,65,485 ಮತದಾರರು ಇದ್ದಾರೆ ಎಂದು ಅವರು ತಿಳಿಸಿದರು.

ಅರ್ಹತೆ ಇರುವ ಎಲ್ಲರೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು. ಅದೇ ರೀತಿ, ನೊಂದಣಿಯಾಗಿರುವ ಮತದಾರರು ಮೃತರಾಗಿದ್ದಲ್ಲಿ, ವಲದೆ ಹೋಗಿದ್ದಲ್ಲಿ, ಎರಡು ಕಡೆ ಹೆಸರುಗಳು ಇದ್ದಲ್ಲಿ ಅಂತಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಪಿ.ಎಸ್.ಹರ್ಷ, ಅಪರ ಮುಖ್ಯ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಕರಿಗೌಡ ಸೇರಿದಂತೆ ಪ್ರಮುಖರಿದ್ದರು.

ಆನ್‍ಲೈನ್‍ನಲ್ಲಿ ನೀವೂ ಪರಿಶೀಲಿಸಿ: ‘ವಿಧಾನಸಭಾ ಕ್ಷೇತ್ರಗಳ  ಮತದಾರರ ಪಟ್ಟಿಯನ್ನು ಅಧಿಕೃತ ಜಾಲತಾಣ https://ceo.karnataka.gov.in/en ನಲ್ಲಿ ಪಿಡಿಎಫ್ ಆವೃತ್ತಿಯಲ್ಲಿ ಪ್ರಕಟಿಸಲಾಗಿದ್ದು, ಆಸಕ್ತರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿ, ಸರಿಯಾದ ಹೆಸರು ನಮೂದಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು. 
........

ಬದಲಾವಣೆಗೆ ಆ್ಯಪ್: ರಾಜ್ಯ ಚುನಾವಣಾ ಆಯೋಗ ಗಿoಣeಡಿ voter helpline mobile app ಅನ್ನು ಬಿಡುಗಡೆ ಮಾಡಿದ್ದು, ಇದನ್ನು ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಮತದಾರರ ಕುರಿತು ಹೆಸರು, ವಿಳಾಸ ಸೇರಿದಂತೆ ಇನ್ನಿತರೆ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

27 ಲಕ್ಷ ನಕಲಿ ಮತದಾರರು..!: ಎರಡೆರಡು ಕಡೆ ಹೆಸರು ನೋಂದಣಿ ಸೇರಿದಂತೆ ಹಲವು ಲೋಪಗಳು ಕಂಡ ಬಂದ ಹಿನ್ನೆಲೆ ಜನವರಿ 1ರಿಂದ ಈವರೆಗೂ 27ಲಕ್ಷ ನಕಲಿ ಮತದಾರರ ಹೆಸರು ರದ್ದುಪಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.

Similar News