ಬಳ್ಳಾರಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ಮಗಳನ್ನೇ ಹತ್ಯೆಗೈದ ತಂದೆ

Update: 2022-11-09 15:20 GMT

ಬಳ್ಳಾರಿ, ನ. 9: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದ ಕಾರಣಕ್ಕೆ ತಂದೆಯೇ ತನ್ನ ಪುತ್ರಿಯನ್ನು ಹರಿಯುವ ನೀರಿನ ಕಾಲುವೆಗೆ ತಳ್ಳಿ ಕೊಲೆಗೈದ ದಾರುಣ ಘಟನೆ ಜಿಲ್ಲೆಯ ಜಿಲ್ಲೆಯ ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ತನ್ನ ಪುತ್ರಿಯನ್ನೇ ಕೊಲೆಗೈದ ಆರೋಪದ ಮೇಲೆ ಕುಡುತಿನಿ ನಿವಾಸಿ ಓಂಕಾರಗೌಡ (45) ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಓಂಕಾರಗೌಡನಿಗೆ ಪರಿಚಯವಿದ್ದ ಗ್ರಾಮದ ಕುರುಬ ಸಮುದಾಯದ ಯುವಕನನ್ನು ಪುತ್ರಿ ಎಂಟನೆ ತರಗತಿಯಲ್ಲಿ ಓದುತ್ತಿದ್ದ ಗಗನಶ್ರೀ (15) ಪ್ರೀತಿಸುತ್ತಿದ್ದಳು. ಈ ಬಗ್ಗೆ ಮನೆಯವರಿಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಆದರೂ ಬಾಲಕಿ, ಯುವಕನೊಡನೆ ತನ್ನ ಪ್ರೀತಿಯ ಒಡನಾಟವನ್ನು ಮುಂದುವರೆಸುತ್ತಿದ್ದಳು ಎಂದು ಹೇಳಲಾಗಿದೆ.

ಆ ಹಿನ್ನೆಲೆಯಲ್ಲಿ ಅ.31ರ ರಾತ್ರಿ ಓಕಾಂರಗೌಡ ಪುತ್ರಿಯನ್ನು ಸಿನಿಮಾ ತೋರಿಸುವ ನೆಪದಲ್ಲಿ ಪುಸಲಾಯಿಸಿ ಬೈಕ್‍ನಲ್ಲಿ ಮನೆಯಿಂದ ಕರೆದೊಯ್ದಿದ್ದ. ಆದರೆ, ಆ ವೇಳೆಗಾಗಲೇ ಸಿನಿಮಾ ಆರಂಭವಾಗಿತ್ತು. ಹೀಗಾಗಿ ಅಲ್ಲಿಂದ ಹೋಟೆಲ್‍ಗೆ ಕರೆದುಕೊಂಡು ಹೋಗಿ ಪುತ್ರಿಗೆ ತಿಂಡಿ ತಿನ್ನಿಸಿ, ಬಳಿಕ ಪಟ್ಟಣದ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ್ದ ಎಂದು ಗೊತ್ತಾಗಿದೆ.

ಮನೆಗೆ ಹಿಂತಿರುಗುವ ಹೊತ್ತಿಗೆ ರಾತ್ರಿಯಾಗಿತ್ತು. ಸಮೀಪದಲ್ಲಿರುವ ತುಂಗಾಭದ್ರ (ಎಚ್‍ಎಲ್‍ಸಿ) ಕಾಲುವೆ ಬಳಿಗೆ ಮಗಳ ಕರೆತಂದು, ಸ್ವಲ್ಪ ಹೊತ್ತು ಇಲ್ಲೇ ನಿಂತಿರು, ಕೆಲಸವಿದೆ ಬರುತ್ತೇನೆ ಎಂದು ಹೇಳಿ ಕಣ್ಮರೆಯಾಗಿದ್ದ. ನಂತರ ಹಿಂದಿನಿಂದ ಬಂದು ಪುತ್ರಿಯನ್ನು ಕಾಲುವೆಗೆ ತಳ್ಳಿದ್ದು ಬಾಲಕಿ ಅಪ್ಪ ಅಪ್ಪ ಎಂದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆಂದು ತಿಳಿದು ಬಂದಿದೆ.

ಅನಂತರ ಈತ ತನ್ನ ಬೈಕ್ ಅನ್ನು ಗೆಳೆಯ ಭೀಮಪ್ಪನ ಮನೆಯಲ್ಲಿ ಬಿಟ್ಟು ತಿರುಪತಿಗೆ ರೈಲು ಹತ್ತಿದ. ತಿರುಪತಿ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಓಂಕಾರಗೌಡನನ್ನು ಬಂಧಿಸಿದ್ದಾರೆ. ಈ ಮಧ್ಯೆ ಆರೋಪಿಯು ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಟ್ಟಿದ್ದ 20ಲಕ್ಷ ರೂ.ಹಣವನ್ನು ಕೊಲೆ ಮಾಡುವ ಮೊದಲು ಅದನ್ನು ಗೆಳೆಯನ ಸಹಾಯದಿಂದ ವರ್ಗಾವಣೆ ಮಾಡಿಕೊಂಡಿದ್ದ. ಪೊಲೀಸರು ಸಂಶಯದ ಮೇಲೆ ವಿಚಾರಣೆ ಮಾಡಿದ್ದು ಕೃತ್ಯ ಬೆಳಕಿಗೆ ಬಂದಿದೆ.

ನ.1ರಂದು ಬಾಲಕಿಯ ತಾಯಿ, ಗಂಡ ಹಾಗೂ ಪುತ್ರಿ ಕಾಣೆಯಾಗಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪರಿಶೀಲಿಸಿದ ಬಳಿಕ ಕೊಲೆಗೈದ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರು ವಿಚಾರಣೆ ಮಾಡಿದ ಸಂದರ್ಭದಲ್ಲಿ ಕೊಲೆಯ ವಿಷಯ ಗೊತ್ತಾಗಿದೆ. ಹೀಗಾಗಿ ಪುತ್ರಿಯನ್ನು ಕೊಲೆಗೈದ ಆರೋಪದ ಮೇಲೆ ಓಂಕಾರಗೌಡ ಹಾಗೂ ಹತ್ಯೆಗೆ ಸಹಕರಿಸಿದ ಆತನ ಸ್ನೇಹಿತ ಭೀಮಪ್ಪ ಎಂಬವನನ್ನು ಬಂಧಿಸಿರುವ ಕುಡುತಿನಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಲ್ಲಿ KGF -2 ಚಿತ್ರದ ಹಾಡು ಬಳಕೆ ವಿವಾದ: ಲಹರಿ ವೇಲು ವಿರುದ್ಧ ನಟಿ ರಮ್ಯಾ ಕಿಡಿ

Similar News