ಸಚಿವ ಆನಂದ್‍ಸಿಂಗ್ ವಿರುದ್ಧ ಸರಕಾರಿ ಭೂಮಿ ಒತ್ತುವರಿ ಆರೋಪ: ಹೈಕೋರ್ಟ್ ನಿಂದ 8 ಮಂದಿಗೆ ನೋಟಿಸ್

Update: 2022-11-09 14:48 GMT

ಬೆಂಗಳೂರು, ನ. 9: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಸರಕಾರಿ ಭೂಮಿ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್ ಮತ್ತು ಸುರಕ್ಷಾ ಎಂಟರ್ ಪ್ರೈಸೆಸ್ ವಿರುದ್ಧ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಎಂಟು ಜನರಿಗೆ ನೋಟಿಸ್ ಜಾರಿ ಮಾಡಿದೆ.

ರಾಜ್ಯ ಸರಕಾರ, ವಿಜಯನಗರ ಜಿಲ್ಲಾಧಿಕಾರಿ, ನೀರಾವರಿ ಇಲಾಖೆ, ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿ ಎಂಟು ಜನರಿಗೆ  ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಒತ್ತುವರಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಮೂಲ ದಾಖಲೆಗಳ ಸಹಿತ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದೆ. 

ಹೊಸಪೇಟೆ ನಗರದಲ್ಲಿ ಸರ್ವೇ ನಂಬರ್ 73, 74, 75ರಲ್ಲಿ ಸುರಕ್ಷಾ ಎಂಟರ್ ಪ್ರೈಸೆಸ್‍ನವರು ಭೂ ಕಬಳಿಕೆ ಮಾಡಿ ಲೇಔಟ್ ನಿರ್ಮಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಸರ್ವೇ ನಂ. 63ರಲ್ಲಿ 0.30 ಸೆಂಟ್ಸ್, ಸರ್ವೇ ನಂಬರ್ 67ರಲ್ಲಿ ಒಳಚರಂಡಿಗೆ ಸೇರಿದ 0.5 ಸೆಂಟ್ಸ್ ಜಾಗವನ್ನು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭೂ ಒತ್ತುವರಿ ಮಾಡಿದ್ದಾರೆ. ಸುರಕ್ಷಾ ಎಂಟರ್ ಪ್ರೈಸೆಸ್  ಹೆಸರಿನಲ್ಲಿರುವ ಹಾಲಿ ಜಮೀನು ಮಾರಾಟ ಮಾಡುವುದಕ್ಕೂ ಮುನ್ನ ಸಚಿವ ಆನಂದ್ ಸಿಂಗ್ ಅದನ್ನು ಭೂ ಪರಿವರ್ತನೆ ಮಾಡಿಸಿಕೊಂಡಿದ್ದರು ಎಂಬ ಆರೋಪವಿದೆ.

ಸಚಿವ ಆನಂದ್ ಸಿಂಗ್ ಮತ್ತು ಸುರಕ್ಷಾ ಎಂಟರ್ ಪ್ರೈಸೆಸ್ ನವರು, ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಡಿ. ವೇಣುಗೋಪಾಲ, ನಗರಸಭೆ 6ನೆ ವಾರ್ಡ್ ಸದಸ್ಯ ಅಬ್ದುಲ್ ಖದೀರ್, ಗುಜ್ಜಲ್ ಹುಲುಗಪ್ಪ, ವಕೀಲ ವಿ.ಚಿದಾನಂದ ಎಂಬುವವರು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಕಾಲಾವಕಾಶದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪ್ರತಿವಾದಿಗಳಿಗೆ ಸೂಚಿಸಿದೆ. 

Similar News