ಚಿಕ್ಕಮಗಳೂರು|ಸುಳ್ಳು ಜಾತಿಪ್ರಮಾಣ ಪತ್ರ ಪಡೆದು ವಂಚನೆ ಆರೋಪ: BJP ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಶಿವಶಂಕರ್ ಗೆ ಸಂಕಷ್ಟ
ಚಿಕ್ಕಮಗಳೂರು, ನ.9: ಜಿಲ್ಲೆಯ ಬಿಜೆಪಿ (BJP) ಮುಖಂಡ, ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಶಂಕರ್(ಶೃಂಗೇರಿ ಶಿವಣ್ಣ) ಎಂಬವರು ಪರಿಶಿಷ್ಟಜಾತಿಯ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರಕಾರ ಹಾಗೂ ಪರಿಶಿಷ್ಟ ಸಮುದಾಯಕ್ಕೆ ವಂಚನೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಪಿಯ ಜಾತಿಪ್ರಮಾಣ ಪತ್ರ ರದ್ದುಪಡಿಸಿ, ಕ್ರಮಕೈಗೊಳ್ಳುವಂತೆ ಬೆಂಗಳೂರು ಎಡಿಜಿಪಿ ಕಚೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲಯವು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರಿಗೆ ಆದೇಶಿಸಿದೆ.
ಶೃಂಗೇರಿ ಪಟ್ಟಣದ ನಿವಾಸಿ ಬಿ.ಶಿವಶಂಕರ್, ಬಿಜೆಪಿ ಪಕ್ಷದಿಂದ ಜಿಪಂ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಶೃಂಗೇರಿ ಶಿವಣ್ಣ ಜಿಪಂ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಇವರ ವಿರುದ್ಧ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚಿಸಿರುವುದಲ್ಲದೇ, ಪರಿಶಿಷ್ಟರ ಸೌಲಭ್ಯಗಳನ್ನು ಪಡೆದು ಸಮುದಾಯದ ಜನರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು.
ಈ ಆರೋಪ ಸಂಬಂಧ ಶೃಂಗೇರಿ ಪಟ್ಟಣದ ಪ್ರಶಾಂತ್ ಎಂಬವರು ಬೆಂಗಳೂರಿನ ಎಡಿಜಿಪಿ ಕಚೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರು, ಸಂಬಂಧಿಸಿದ ದಾಖಲಾತಿ ಸೇರಿದಂತೆ ಸ್ಥಳೀಯರ ಹೇಳಿಕೆ, ಸಂಬಂಧಿಸಿದ ಇಲಾಖೆಗಳ ವರದಿ, ಸ್ಥಳ ತನಿಖೆ, ಸಾಕ್ಷಾಧಾರಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದು, ತನಿಖೆಯಲ್ಲಿ ಆರೋಪಿ ಬಿ.ಶಿವಶಂಕರ್ ಬಿನ್ ಬಂಗಾರಸ್ವಾಮಿ ಅವರು ಶೃಂಗೇರಿ ತಹಶೀಲ್ದಾರ್ ಅವರಿಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟಜಾತಿಯ ಪ್ರಮಾಣ ಪತ್ರ ಪಡೆದಿರುವುದು ದೃಢಪಟ್ಟಿದೆ.
ಆರೋಪಿ ಶಿವಶಂಕರ್ ಹಿಂದುಳಿದ ವರ್ಗಗಳ ಪ್ರವರ್ಗ-3ರಲ್ಲಿ ಬರುವ ಭೋವಿ ಜನಾಂಗದವರಾಗಿದ್ದು, ಸುಳ್ಳು ಮಾಹಿತಿ ನೀಡಿ ಪರಿಶಿಷ್ಟಜಾತಿಯ ಭೋವಿ ಜಾತಿ ಪ್ರಮಾಣಪತ್ರ ಪಡೆದು ಸರಕಾರ ಹಾಗೂ ಪರಿಶಿಷ್ಟಜಾತಿಯವರಿಗೆ ಸೇರಬೇಕಿದ್ದ ಸೌಲಭ್ಯಗಳನ್ನು ಪಡೆದು ವಂಚಿಸಿರುವುದು ದೃಢಪಟ್ಟಿದೆ.
ಇದನ್ನೂ ಓದಿ... ಬಳ್ಳಾರಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ಮಗಳನ್ನೇ ಹತ್ಯೆಗೈದ ತಂದೆ
ಈ ಹಿನ್ನೆಲೆಯಲ್ಲಿ ಎಡಿಜಿಪಿ ಕಚೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಯವು ಸುಳ್ಳುಜಾತಿ ಪ್ರಮಾಣಪತ್ರವನ್ನು ರದ್ದು ಪಡಿಸಿ ಸೂಕ್ತ ಕ್ರಮಕೈಗೊಂಡು ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರಿಗೆ ಆದೇಶಿಸಿದೆ.
ಬಿಜೆಪಿ ಮುಖಂಡ ಬಿ.ಶಿವಶಂಕರ್ ಅವರು ಈ ಹಿಂದೆ ತಾಪಂ, ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದು, ಜಿಪಂ ಮಾಜಿ ಅಧ್ಯಕ್ಷರೂ ಆಗಿದ್ದಾರೆ.