ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ ಪಾಲಿಕೆ

Update: 2022-11-10 02:15 GMT

ಹುಬ್ಬಳ್ಳಿ : ಇಲ್ಲಿನ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿ ಎಲ್ಲ ಜಯಂತಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ತಿಳಿಸಿದ್ದಾರೆ.

ಇಂದು (ನ.9) ವಿರೋಧ ಪಕ್ಷದ ನಾಯಕರು, ಆಯುಕ್ತರೊಂದಿಗೆ ಮೇಯರ್ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ''ಧಾರ್ಮಿಕವಾಗಿ, ಸಾಮಾಜಿಕವಾಗಿ ಆ ಮೈದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಪಾಲಿಕೆ ಸ್ವತಂತ್ರವಾಗಿದೆ. ಅದರಲ್ಲಿ ಹಿಂದೂ , ಮುಸ್ಲಿಮ್, ಕ್ರಿಶ್ಚನ್ ಎಂದೇನಿಲ್ಲ, ಟಿಪ್ಪು,  ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ ಸಂಘಟಕರು ಮನವಿ ಮಾಡಿದ್ದರು. ಹೀಗಾಗಿ ಎಲ್ಲ ಜಯಂತಿಗೂ ಅವಕಾಶ ಮಾಡಿಕೊಟ್ಟಿದ್ದೇವೆ'' ಎಂದು ತಿಳಿಸಿದ್ದಾರೆ.

''ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಜಯಂತಿ ಸೇರಿದಂತೆ ಎಲ್ಲ ಜಯಂತಿ ಆಚರಣೆಗೆ ಅನುಮತಿ ನೀಡಲಾಗಿದ್ದು, ಕೆಲವು ನೀತಿ ನಿಯಮಗಳನ್ನು ಹಾಕಿ ಅನುಮತಿ ನೀಡಲಾಗಿದೆ'' ಎಂದು ತಿಳಿಸಿದ್ದಾರೆ.

ಎಐಎಂಐಎಂ ಮತ್ತು ಇತರ ಕೆಲವು ಸಂಘಟನೆಗಳು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿತ್ತು ಎಂದು ತಿಳಿದು ಬಂದಿದೆ. 

Similar News