ಚಿತ್ರದುರ್ಗ: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿಯ ಬಂಧನ

Update: 2022-11-10 05:39 GMT

ಚಿತ್ರದುರ್ಗ, ನ.10: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಗುರುವಾರ ಬಂಧಿಸಿರುವುದು ವರದಿಯಾಗಿದೆ.

 ರಾಜಾಂಗಣದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ ಫೋಟೊ ಕಳವು ಮಾಡಿದ ಪ್ರಕರಣದಲ್ಲಿ ಬಸವರಾಜನ್ ರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದೇ ಪ್ರಕರಣಕ್ಕೆ ಸಂಬಂದಿಸಿ ಬಂಧಿತರಾಗಿರುವ ಹೊಸಹಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೋಹನಮೂರ್ತಿ ಹಾಗೂ ಡಿಪ್ಲೊಮಾ ಕಾಲೇಜು ಉಪನ್ಯಾಸಕ ಶಿವಾನಂದಸ್ವಾಮಿ ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಫೋಟೊ ಕಳವಿಗೆ ಆರೋಪಿ ಬಸವರಾಜನ್ ಪ್ರಚೋದನೆ ಮಾಡಿದ್ದಾರೆ ಎಂಬ ಆರೋಪವಿದ ಮೇರೆಗೆ ಬಂಧಿಸಲಾಗಿದೆ.

ಮತ್ತೊಬ್ಬ ಆರೋಪಿ ಶ್ರೀನಿವಾಸ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಸವರಾಜನ್ ಪತ್ನಿ ಸೌಭಾಗ್ಯಾ ಅವರಿಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 ಮುರುಘಾ ಮಠದ ರಾಜಾಂಗಣದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ 47 ಫೋಟೊಗಳು ಅ.6ರಂದು ಕಳುವಾಗಿದ್ದವು. ಮಠಕ್ಕೆ ಗಣ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಮುರುಘಾ ಶರಣರು ತೆಗೆಸಿಕೊಂಡ ಫೋಟೊಗಳನ್ನು ರಾಜಾಂಗಣದಲ್ಲಿ ಹಾಕಲಾಗಿತ್ತು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದ ಮೇರೆಗೆ ನ.7ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

Similar News